ಮನುಷ್ಯರಿಗೆ ಅಂತರಗ್ನಿಯು, ದೇವತೆಗಳಿಗೆ ಬಹಿರಗ್ನಿಯು.
ಅದೆಂತೆಂದೊಡೆ:
ಮನುಷ್ಯರು ತಮ್ಮ ಜಠರಾಗ್ನಿಗೆ ಆಹುತಿಯಂ ಕೊಟ್ಟಲ್ಲಿ,
ಧಾತುವರ್ಧನವಾಗಿ ಜೀವನು ತೃಪ್ತಿಪಡುವನು.
ದೇವತೆಗಳು ಬಾಹ್ಯಾಗ್ನಿಯಲ್ಲಿ
ಶುಚಿಯೂ ರುಚಿಯೂ ಆಗಿರ್ಪ
ಅಮೃತವನ್ನು ಆಹುತಿಯಂ ಕೊಟ್ಟಲ್ಲಿ,
ಅದರಿಂದ ಬ್ರಹ್ಮಾಂಡದಲ್ಲಿ ಧಾತುವರ್ಧನಮಾಗಿ,
ದೇವತಾಶ್ರೇಷ್ಠನಾದ ಪರಮಾತ್ಮನು ತೃಪ್ತಿಬಡುತ್ತಿರ್ಪನು.
ದುರಾಹಾರವಾದರೂ ಅಗ್ನಿಮಾಂದ್ಯವಾದರೂ
ಶರೀರದಲ್ಲಿ ವ್ಯಾಧಿಯು ಉಲ್ಬಣವಾಗುವಂತೆ,
ತಮೋದ್ರವ್ಯವಾದರೂ ಅಗ್ನಿಪ್ರಕಾಶವಾಗದಿದ್ದರೂ ನ್ಯೂನಾತಿರಿಕ್ತವಾದರೂ,
ಅದರಿಂದ ರಾಕ್ಷಸರು ವರ್ಧಿಸಿ ಬ್ರಹ್ಮಾಂಡವನೆ ಕೆಡಿಸುತ್ತಿಹರು.
ಅಂತರಗ್ನಿಗೂ ಬಹಿರಗ್ನಿಗೂ ಸ್ವಾಹಾಮುಖದಲ್ಲಿ
ಆಹುತಿಯಂ ಕೊಡಬೇಕು.
ಏನು ಕಾರಣ ಸ್ವಾಹಾಮುಖದಲ್ಲಿ
ಆಹುತಿಯಂ ಕೊಡಬೇಕೆಂದರೆ,
ತಾನು ಸಂಹರಿಸುವುದೇ ಅಗ್ನಿಗುಣವು,
ಆ ಗುಣವೇ ಆತನಿಗೆ ಶಕ್ತಿಯಾಗಿರ್ಪುದು.
ಅದೆಂತೆಂದರೆ:
ಸದಾಶಿವನ ಸಂಹಾರಗುಣವೇ
ಆ ಶಿವನಿಗೆ ಶಕ್ತಿಯಾಗಿರ್ಪಂತೆಯೂ
ವಿಷ್ಣುವಿನ ರಕ್ಷಣಗುಣವೇ ಆತನಿಗೈಶ್ವರ್ಯಶಕ್ತಿಯಾಗಿರ್ಪಂತೆಯೂ
ಬ್ರಹ್ಮನ ಸೃಷ್ಟಿಗುಣವೇ ಆತನಿಗೆ ವಿವೇಕಶಕ್ತಿಯಾಗಿರ್ಪಂತೆಯೂ
ಅಗ್ನಿಯ ಸ್ವಾಹಾಗುಣವೇ ಅಗ್ನಿಗೆ ಶಕ್ತಿಯಾಗಿರ್ಪುದು.
ಸದಾಶಿವನ ಸಂಹಾರಶಕ್ತಿಯಂ ಸ್ಮರಿಸಿ,
ಮಂತ್ರಂಗಳಿಂದುಪಶಾಂತಿಯಂ ಮಾಡುತಿರ್ಪಂತೆ,
ಸಕಲದೇವತಾಸ್ವರೂಪಮಾದ ಅಗ್ನಿಯ ಗುಣವಂ ಸ್ಮರಿಸಿ
ಆಹುತಿಯಂ ಕೊಡುತಿರ್ಪರು.
ಇಂತಪ್ಪ ಹವಿರಾದಿ ಸಕಲ ಕರ್ಮಗಳನ್ನು
ಜ್ಞಾನಮುಖದಲ್ಲಿ ತಿಳಿದು
ಭಾವಜ್ಞನಾಗಾಚರಿಸಿದಲ್ಲಿ ದೇವತಾಪ್ರೀತಿಯಪ್ಪುದು.
ಜ್ಞಾನವಿಲ್ಲದೆ ಮಹಾದಿವ್ಯಜ್ಞಾನಿಪುರುಷರಿಂ
ಪ್ರತ್ಯಕ್ಷೋಪದೇಶವಿಲ್ಲದೆ,
ಕೆಲವು ಗ್ರಂಥಂಗಳಂ ನೋಡಿ, ಮಂತ್ರಂಗಳಂ ಕಲಿತು,
ಆ ಪ್ರಕಾರಮಾಡಿದಲ್ಲಿ ಘೋರನರಕವನನುಭವಿಸುವರು.
ಅಂತಪ್ಪ ಜ್ಞಾನಯುಕ್ತವಾದ ಕರ್ಮವಂ
ನನಗುಪದೇಶಿಸಿ ಸಲಹಾ
ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
Art
Manuscript
Music
Courtesy:
Transliteration
Manuṣyarige antaragniyu, dēvategaḷige bahiragniyu.
Adentendoḍe:
Manuṣyaru tam'ma jaṭharāgnige āhutiyaṁ koṭṭalli,
dhātuvardhanavāgi jīvanu tr̥ptipaḍuvanu.
Dēvategaḷu bāhyāgniyalli
śuciyū ruciyū āgirpa
amr̥tavannu āhutiyaṁ koṭṭalli,
adarinda brahmāṇḍadalli dhātuvardhanamāgi,
dēvatāśrēṣṭhanāda paramātmanu tr̥ptibaḍuttirpanu.
Durāhāravādarū agnimāndyavādarū
śarīradalli vyādhiyu ulbaṇavāguvante,
tamōdravyavādarū agniprakāśavāgadiddarū n'yūnātiriktavādarū,
adarinda rākṣasaru vardhisi brahmāṇḍavane keḍisuttiharu.
Antaragnigū bahiragnigū svāhāmukhadalli
āhutiyaṁ koḍabēku.
Ēnu kāraṇa svāhāmukhadalli
āhutiyaṁ koḍabēkendare,
Tānu sanharisuvudē agniguṇavu,
ā guṇavē ātanige śaktiyāgirpudu.
Adentendare:
Sadāśivana sanhāraguṇavē
ā śivanige śaktiyāgirpanteyū
viṣṇuvina rakṣaṇaguṇavē ātanigaiśvaryaśaktiyāgirpanteyū
brahmana sr̥ṣṭiguṇavē ātanige vivēkaśaktiyāgirpanteyū
agniya svāhāguṇavē agnige śaktiyāgirpudu.
Sadāśivana sanhāraśaktiyaṁ smarisi,
Mantraṅgaḷindupaśāntiyaṁ māḍutirpante,
sakaladēvatāsvarūpamāda agniya guṇavaṁ smarisi
āhutiyaṁ koḍutirparu.
Intappa havirādi sakala karmagaḷannu
jñānamukhadalli tiḷidu
bhāvajñanāgācarisidalli dēvatāprītiyappudu.
Jñānavillade mahādivyajñānipuruṣariṁ
pratyakṣōpadēśavillade,
Kelavu granthaṅgaḷaṁ nōḍi, mantraṅgaḷaṁ kalitu,
ā prakāramāḍidalli ghōranarakavananubhavisuvaru.
Antappa jñānayuktavāda karmavaṁ
nanagupadēśisi salahā
mahāghana doḍḍadēśikāryaguruprabhuve.