Index   ವಚನ - 91    Search  
 
ಅಖಂಡಪರಿಪೂರ್ಣವಾಗಿ ಸಕಲವೂ ತಾನೇ ಆಗಿರ್ಪ ಸದಾಶಿವನು, ಸಕಲ ಸುಖದುಃಖಾದ್ಯನುಭವಂಗಳನನುಭವಿಸುತ್ತಾ, ನಿತ್ಯಾನಂದಮಯನಾಗಿರ್ಪನದೆಂಡೆಂದೊಡೆ: ಸ್ತ್ರೀವಂಶಗತನಾದವಂಗೆ ನಖಕ್ಷತ, ದಂತಕ್ಷತ, ತಾಡನ, ಅರ್ಥವ್ಯಯಾದಿ ಸಕಲ ಸುಖ ದುಃಖಗಳು ಸುಖರೂಪಮಾಗಿ ತೋರುತ್ತಿರ್ಪಂತೆ. ಮಹಾದೇವಿಯೊಡನೆ ಕ್ರೀಡಿಸುತ್ತಿರ್ಪ ಶಿವನಿಗೆ ಸಕಲಸುಖದುಃಖಂಗಳಾನಂದಜನಕಮಾಗಿರ್ಪವು. ಜೀವಾಂಶಗಳಾಗಿರ್ಪ ಗುಣಂಗಳು ಆ ಜೀವಸ್ವರೂಪಸ್ವಭಾವವನರಿಯದಿರ್ಪಂತೆ, ನಿನ್ನ ಮಹಿಮೆಯಂ ಕಿಂಚಿತಜ್ಞನಾದ ನಾನೆತ್ತ ಬಲ್ಲೆನು? ಮನವಂ ಜಯಿಸಬಲ್ಲ ಸರ್ವಜ್ಞನಾದ ಜೀವನು ಗುಣಂಗಳು ಮಾಡಿದ ದುಷ್ಕರ್ಮಂಗಳಂ ಹೊಂದದೆ ಸ್ವಸ್ವರೂಪದಲ್ಲಿ ಪ್ರಕಾಶಿಸುತ್ತಿರ್ಪಂತೆ, ಬ್ರಹ್ಮಾದಿ ಸಕಲಪ್ರಪಂಚವಂ ಸಂಹರಿಸಲು ಶಕ್ತನಾದುದರಿಂ ಜೀವರು ಮಾಢಿದ ದುಷ್ಕರ್ಮಂಗಳು ನಿನ್ನಂ ಹೊಂದದೆ, ಸಕಲವೂ ನೀನೆಯಾಗಿರ್ಪ ನಿನ್ನ ಮಹಿಮೆಯು ನನಗೆ ಸಾಧ್ಯಮಪ್ಪಂತೆ ಮಾಡಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.