Index   ವಚನ - 100    Search  
 
ಚಿದ್ರೂಪಮಾದ ಮಹವೆಂದರೆ ಮಹಾಜ್ಞಾನವೆಂದರ್ಥ. ಸರ್ವಜ್ಞನಾಮವುಳ್ಳ ಅಖಂಡಪರಿಪೂರ್ಣಜ್ಞಾನವೇ ಆತ್ಮನು, ಅವಂ ನಿಜಭಾವವೇ ತತ್ವವು, ಆತ್ಮನಿಂ ಭಿನ್ನಿಸಿದ ತತ್ವಶೇಷವೇ ಪರರೂಪಮಾದ ಪ್ರಸಾದವು. ಅದು ಅನುಭವಿಸಿದಲ್ಲಿ ಒಳಗೆ ಪ್ರಕಾಶಿಸುತ್ತಿರ್ಪುದು, ಸಾಧಿಸಿದಲ್ಲಿ ಹೊರಗೆ ಕಾಣಿಸುತ್ತಿರ್ಪುದು. ಆಕಾಶಮಯ ಪರಪ್ರಸಾದವೆಂದೊಡೆ ಉತ್ಕೃಷ್ಟವಾಗಿ ಕಾಣಿಸುವುದೆಂದರ್ಥ. ಅದು ಜ್ಞಾನಿಗೆ ಬಹಿರಂಗದಲ್ಲಿ ಮಲಿನವಾಗಿಯೂ ಅಂತರಂಗದಲ್ಲಿ ನಿರ್ಮಲವಾಗಿಯೂ ಇರ್ಪುದು. ಅಂತಪ್ಪ ಆತ್ಮಶೇಷವೇ ಆದಿಜಂಗಮವು. ನಿರ್ಮಲಾತ್ಮನು ಸಾಕಾರಕ್ಕೆ ಬಪ್ಪಲ್ಲಿ ಚಲನವೇ ಆದಿಶಕ್ತಿಯಾದುದರಿಂ ಆದಿಶಕ್ತಿಯುಕ್ತವೇ ಜಂಗಮವಾಯಿತ್ತು. ಆದಿಜಂಗಮವೇ ವಾಯು, ಅದರ ಚಲನವೇ ಇಚ್ಛಾರೂಪಮಾದಲ್ಲಿ ಇಚ್ಛಾಶೋಭನವೇ ಅಗ್ನಿಯಾದುದರಿಂ ಇಚ್ಛಾರೂಪಮಾದ ಶಿವನು ಆಯಿತ್ತು. ಅದೇ ಜೀವೋಪದೇಶವಾಂಛೆಯಿಂ ಮಂತ್ರರೂಪಮಾದ ಗುರುವಾಯಿತ್ತು. `ಮನನಾ ತ್ತ್ರಾಯತ ಇತಿ ಮಂತ್ರಃ' ಎಂಬ ವ್ಯುತ್ಪತ್ತಿಯಿಂ ದೊಡ್ಡಿತ್ತಾಗಿ ಜನರಂ ರಕ್ಷಿಸುವಂಥಾದ್ದೇ ಗುರುಮಂತ್ರವು. ಆ ಮಂತ್ರವೇ ಕ್ರಿಯೆಯಾದುದರಿಂ ಕ್ರಿಯಾರೂಪವುಳ್ಳ ಆಚಾರಮಾಯಿತ್ತು. ಕ್ರಿಯೆಯೊಳಗೆ ಕೂಡಿ ರಾಜಿಸುತ್ತಿರ್ಪುದೇ ಪೃಥ್ವಿಯಾದುದರಿಂ ಕ್ರಿಯಾಚಾರಮಾಯಿತ್ತು. ಆದುದರಿಂ ಮಹಾಜ್ಞಾನವೇ ಆತ್ಮನು, ತದುನುಭವತತ್ವವೇ ಪಂಚಭೂತರೂಪಮಾದ ಶಕ್ತಿಯು, ಪಂಚಭೂತಾಂಶವೇ ಶರೀರವು, ಅಕ್ಷಾಂಶವೇ ಜೀವನು. ಜೀವನಿಗೆ ಮಹತ್ವದಲ್ಲಿ ಆತ್ಮನೊಳೈಕ್ಯವು, ಶರೀರವು ಜೀರ್ಣಮಾದಲ್ಲಿ ಭೂತದೊಳೈಕ್ಯವು, ಶರೀರಮೋಕ್ಷಕ್ಕಿಂತಲೂ ದುಃಖವಿಲ್ಲ, ಜೀವನ್ಮುಕ್ತಿಗಿಂತಲೂ ಸುಖವಿಲ್ಲ, ಪ್ರಪಂಚವೆಲ್ಲ ಆತ್ಮಶೇಷಮಾದುದರಿಂ ಹೇಯರೂಪಮಾದ ದುಃಖಮಾಯಿತ್ತು. ಅದೇ ಶಿವನ ಪ್ರಸಾದವೆಂದು ತಿಳಿದು, ಅದನ್ನು ಶಿವಾರ್ಪಣಮುಖದಲ್ಲಿ ಸೇವಿಸಬಲ್ಲಾತನೇ ಜೀವನ್ಮುಕ್ತನು. ಅಂತಪ್ಪ ಜೀವನ್ಮುಕ್ತಿಯನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.