Index   ವಚನ - 102    Search  
 
ಸತ್ತೆಂದರೆ ಸತ್ತೇ, ಚಿತ್ತೆಂದರೆ ಚೇತನ, ಆನಂದವೆಂದರೆ ಸಮ್ಯಕ್ಪ್ರಕಾಶ, ಆ ಸದ್ಧರ್ಮವೇ ಸತ್ವ, ಆ ಸತ್ವವೇ ರಕ್ಷಣಕಾರಣಮಾಗಿಹುದು, ಚಿತ್ತೇ ಸಂಹಾರಕಾರಣಮಾಗಿಹುದು. ರಜಸ್ಸೆಂದರೆ ರಾಗ, ರಾಗವೆಂದರೆ ಆನಂದ. ಆ ರಜಸ್ಸೇ ಕ್ರೀಡೆಯಲ್ಲಿಗಮಿಸುತ್ತಿರ್ಪುದರಿಂ ಸೃಷ್ಟಿಕಾರಣಮಾಯಿತ್ತು. ಸಚ್ಚಿತ್ಸಂಗವೇ ಆನಂದಮಾದುದರಿಂ ಸ್ವತಂತ್ರಧರ್ಮವಿಲ್ಲದೆ ಭಾವಪರವಾಯಿತ್ತು. ಸತ್ತೇ ಶಕ್ತಿಯು, ಚಿತ್ತೇ ಶಿವನು, ಈ ಎರಡರ ಸಂಗವೇ ಆನಂದವು, ಸತ್ತೇ ಭಕ್ತಿಯು, ಚಿತ್ತೇ ಜ್ಞಾನವು, ಇವೆರಡರಸಂಗವೇ ಮುಕ್ತಿಯು, ಆ ಮುಕ್ತಿಯೇ ಆನಂದವು. ಸದ್ಭಕ್ತಿ ಕರಣವೇ ಕಾಯ, ಜ್ಞಾನಕರಣವೇ ಚೇತಸ್ಸು, ಮುಕ್ತ್ಯಾನಂದಕರಣವೇ ಭಾವವು. ಸತ್ತು ಸ್ಥೂಲವಾಗಿಹುದು, ಚಿತ್ತು ಸೂಕ್ಷ್ಮವಾಗಿಹುದು, ಆನಂದವು, ಕಾರಣಮಾಗಿಹುದು. ಈ ಆನಂದವು ಕರಮಾರ್ಗದಲ್ಲಿ ಮುಕ್ತಿರೂಪಮಾಗಿಹುದು, ದಕ್ಷಿಣಮಾರ್ಗದಲ್ಲಿ ಸೃಷ್ಟಿರೂಪಮಾಗಿಹುದು. ಆ ಸೃಷ್ಟಿಕಾರಣಮೆಂತೆಂದೊಡೆ: ಸತ್ತಿನಲ್ಲಿ ಕಾಮವೂ ಚಿತ್ತದಲ್ಲಿ ಕ್ರೋಧವೂ ಆನಂದದಲ್ಲಿ ಮೋಹವೂ ಸತ್ತಿನಲ್ಲಿ ಲೋಭವೂ ಚಿತ್ತಿನಲ್ಲಿ ಮದವೂ ಆನಂದದಲ್ಲಿ ಮತ್ಸರವೂ ಇರ್ಪುದು. ಸತ್ತೇ ಬಿಂದುರೂಪು, ಚಿತ್ತೇ ನಾದರೂಪು, ಆನಂದವೇ ಕಳಾರೂಪು. ಕಾಮಮೋಹಗಳಿಂ ಸತ್ಕರ್ಮವೇ ದುಷ್ಕರ್ಮವಾಯಿತ್ತು, ಕ್ರೂರ ಮದವೇ ಚಿದ್‌ಜ್ಞಾನವಾಯಿತ್ತು. ಲೋಭಮತ್ಸರಗಳಿಂ ನಿರುಪಾಧಿಕಮೋಕ್ಷಾನಂದವೇ ಸೋಪಾಧಿಕ ಪ್ರಪಂಚಾನಂದಮಾಗಿ ದುಃಖಹೇತುವಾಯಿತ್ತು. ಮದ ಬಿಂದುವರ್ತಿಯಲ್ಲಿ ಅಖಂಡನಿರುಪಾಧಿಕಚಿಚ್ಚ್ಯೋತಿಯೊಡನೆ ಸೋಪಾಧಿಕಮಾಗಿ ಕೂಡಿ ವಿಕಾರಮಾಗಿರ್ಪುದೇ ಜೀವನು, ನಿತ್ಯ ಭಾಸ್ವರಮಯಮಾಗಿರ್ಪುದೇ ಶಿವನು. ಅದರ ಸುಖವೇ ತನ್ನ ಸುಖವಾಗಿ, ಅದರ ದುಃಖವೇ ತನ್ನ ದುಃಖವಾಗಿ, ಅದರ ಮೇಳನವೇ ತನ್ನ ಮೇಳನವಾಗಿ, ಅದರ ಪ್ರಕಾಶವೇ ತನ್ನ ಪ್ರಕಾಶವಾಗಿ, ಸ್ಥೂಲ ಸೂಕ್ಷ್ಮ ಕಾರಣವೆಂಬುಪಾಧಿಯೊಳಗೆ ಕೂಡಿ, ಅದನು ಬಿಡದೆ, ಉಪಾಧಿಯು ಇದ್ದಂತಿರ್ಪುದೇ ಭವವು. ಇದಕ್ಕೆ ಪರಿಹಾರಮೆಂತೆಂದೊಡೆ: ಚಿತ್ತು ಜ್ಞಾನಮಧ್ಯದಲ್ಲಿರ್ಪ ಮನೋಮಲಿನವನ್ನು ಸತ್ವರೂಪಮಾದ ಭಕ್ತಿಯಿಂ ಪರಿಹರಿಸಿದಲ್ಲಿ; ಆ ಚಿತ್ಪ್ರಭೆಯಿಂ ಜ್ಞಾನಪ್ರಕಾಶವಾದಲ್ಲಿ, ಆ ಜ್ಞಾನದಿಂ ಸತ್ತಿನಲ್ಲಿರ್ಪ ಕಾಮಾಹಂಗಳಳಿದು, ಶರೀರವು ಪೂತಮಾದಲ್ಲಿ; ಸದ್ಭಕ್ತಿಯು ಪ್ರಕಾಶಮಾಗಿ, ಕ್ರೋಧಮದಂಗಳಳಿದು, ಲೋಭಮತ್ಸರಂಗಳಳಿದು, ಭಕ್ತಿಜ್ಞಾನಗಳಿಂ ಭಾವವು ಶುದ್ಧಮಾದಲ್ಲಿ ಈ ಭಕ್ತಿಯಿಂದ ಲೋಭವಳಿದುದು, ಆ ಜ್ಞಾನದಿಂದಾ ಮತ್ಸರವಳಿದು, ಸ್ವಸ್ವರೂಪವು ಪ್ರಕಾಶಮಾಗಿ, ಶಿವಧ್ಯಾನಪರಾಯಣನಾಗಿರ್ಪಲ್ಲಿ; ಸದ್ರೂಪಮಾದ ಗುರುವು ಚಿದ್ರೂಪಮಾದ ಲಿಂಗವಂ ಆನಂದರೂಪಮಾದ ಜಂಗಮಮುಖದಲ್ಲಿ ಸಾಕಾರಕ್ಕೆ ತಂದು ಕೊಟ್ಟಲ್ಲಿ; ಆ ಸತ್ತೇ ಇಷ್ಟಮಾಗಿ, ತನ್ಮಹಿಮೆಯೇ ಆನಂದಭಾವಮಾಗಿ, ಸದ್ಭಕ್ತಿ ಕ್ರಿಯಾಮುಖದಿಂ ಶರೀರವು ಸಮೆದು, ಚಿದ್‌ಜ್ಞಾನೇಚ್ಛಾಮುಖದಿಂ ಮನಸ್ಸಳಿದು, ಸಚ್ಚಿತ್ಪ್ರಕಾಶಮಾದ ಇಷ್ಟಪ್ರಾಣಂಗಳು ಭಕ್ತಿಜ್ಞಾನಂಗಳನೊಳಕೊಂಡು, ಆನಂದಮಯವಾದ ಭಾವದಲ್ಲಿ ಒಂದೆಯಾಗಿ, ಆ ಮೋಕ್ಷಾನಂದದಲ್ಲಿ ಭಾವಂ ನಿರ್ಭಾವಮಾಗಿರ್ಪುದೇ ಲಿಂಗೈಕ್ಯವು. ಅಂತಪ್ಪ ಮೋಕ್ಷಾನಂದಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.