Index   ವಚನ - 120    Search  
 
ಗುರುವಿನ ಹಸ್ತವು ಜಂಗಮದ ಪಾದಾಂಗುಷ್ಠವು ಘಾತಮೆಂತೆಂದಡೆ: ಗುರುವಿನ ಹಸ್ತ ಕರ್ಮಮೂಲಮಾದುದರಿಂ ಇಷ್ಟ ಸಾಧ್ಯಮಪ್ಪುದು. ಜಂಗಮಪಾದ ಜ್ಞಾನ ಮೂಲಮೆಂತೆಂದಡೆ: ತೀರ್ಥಯಾತ್ರೆಗೆ ಜ್ಞಾನವೇ ಮೂಲ ಅದಕ್ಕೆ ಪಾದವೆ ಕರಣವಾಗಿಹುದು. ಆ ಪಾದಕ್ಕೆ ಉಂಗುಷ್ಠವೆ ಆಧಾರವಾದುದರಿಂ ಪರಮ ಪವಿತ್ರ. ಅಲ್ಲಿ ಪ್ರಾಣಲಿಂಗ ಜನನ. ಗುರುಹಸ್ತೋದ್ಭೂತೇಷ್ಟಲಿಂಗವೇ ಪೃಥ್ವಿರೂಪು. ಜಂಗಮ ಪಾದೋದ್ಭವ ಪ್ರಾಣಲಿಂಗವೆ ಜಲರೂಪು. ಆ ಪೃಥ್ವಿ ಲಿಂಗಕ್ಕೆ ಆ ತೀರ್ಥಲಿಂಗವೆ ಪ್ರಾಣರೂಪು. ಆ ಇಷ್ಟ ಪ್ರಾಣಲಿಂಗಗಳೆರಡು ಏಕಮಾದಲ್ಲಿ ತೇಜೋರೂಪಮಾಗಿ, ಭಾವನಾಯೋಗ್ಯವಾಗಿ ಲಿಂಗಮೆಂದು ಭಾವಿಸಲ್ಪಟ್ಟುದರಿಂ ಭಾವಲಿಂಗಮಾಯಿತ್ತು. ಅಂತಪ್ಪ ತೇಜೋಲಿಂಗ ಸಂಗದಿಂ ನನ್ನ ಶರೀರಾದಿ ಕರ್ಮ ಕಾಷ್ಠತ್ರಯಂಗಳು ಭಸ್ಮಮಾದುದರಿಂ ಶಿವಭಕ್ತ ಶರೀರ ಪುನರ್ದಹನ ಯೋಗ್ಯಮಲ್ಲಮಾಯಿತ್ತು. ನಾನೆಂಬ ಭಸ್ಮ ನಿನಗೆ ಲೇಪನವಾಗಿರ್ಪುದೆ ಲಿಂಗೈಕ್ಯ. ಅಂತಪ್ಪ ಲಿಂಗೈಕ್ಯ ಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ.