Index   ವಚನ - 122    Search  
 
ಘಟ ಮುದಿಸುತಲೆ ಘಟಮುತ್ಪನ್ನವಾಗುವಂತೆ, ಸಾಕಾರ ಶರೀರಮುದಿಸುತಲೇ ನಿರಾಕಾರಸ್ವಪ್ನಮುತ್ಪನ್ನಮಾಗಿ, ಬೀಜ ವೃಕ್ಷನ್ಯಾಯದಂತೆ ಆದ್ಯಂತಂಗಳು ತಿಳಿಯದೆ ಒಂದಕ್ಕೊಂದು ಕಾರಣಮಾಗಿರ್ಪುದರಿಂ ಸಾಕಾರದಲ್ಲಿ ಶರೀರವೇ ಜಾಗ್ರಮಾಗಿ, ಭಾವವೇ ಸ್ವಪ್ನಮಾಗಿ ಇಹುದು. ನಿರಾಕಾರದಲ್ಲಿ ಭಾವವೇ ಜಾಗ್ರಮಾಗಿ ಸಾಕಾರಶರೀರವೇ ಸ್ವಪ್ನವಾಗಿ ಇಹುದು. ತಮಸ್ಸಿನಲ್ಲಿ ಸ್ವಪ್ನ ಶರೀರ ಕಾಣಿಸುತ್ತಿಹುದು. ಜಾಗ್ರದಲ್ಲಿ ಸ್ಥೂಲಶರೀರ ಕಾಣಿಸುತ್ತಿಹುದೆಂತೆಂದಡೆ: ರಾತ್ರಿಯಲ್ಲಿ ಆಕಾಶವೂ ದಿವದಲ್ಲಿ ಪೃಥ್ವಿಯೂ ಕಾಣಿಸುತ್ತಿಪ್ಪಂತೆ. ಆ ಸ್ವಪ್ನ ಶರೀರಕ್ಕೂ ಈ ಸ್ಥೂಲ ಶರೀರಕ್ಕೂ ನಾದ ಬಿಂದು ಕಳಾ ವ್ಯವಹಾರಂಗಳಲ್ಲಿ ಸಂಬಂಧಮಾಗುತ್ತಿರ್ಪುದೆಂತೆಂದಡೆ: ಸಾಕಾರವಾದ ಇಂದ್ರಿಯಂಗಳಿಗೂ ನಿರಾಕಾರವಾದ ಮನಸ್ಸಿಗೂ ಸಂಬಂಧಮಾಗಿರ್ಪಂತೆ. ಆ ಮನಸ್ಸಿಗೆ ಸುಖದುಃಖಂಗಳು ಇಂದ್ರಿಯ ಮುಖಂಗಳಿಂದಡಸಿದಲ್ಲಿ ಈ ಇಂದ್ರಿಯಂಗಳು ದ್ರವಿಸಿ, ಕಂಪಿಸಿ ಘೋಷಿಸಿ, ನಶಿಸಿ, ಪ್ರಕಾಶಿಸಿ ಅಹಂಕರಿಸುತ್ತಿರ್ಪಂತೆ. ಆ ಭಾವಮಯಮಾದ ಸ್ವಪ್ನ ಶರೀರದಲ್ಲಿ ಈ ಶರೀರಕರ್ಮದಿಂದಲೇ ತೋರುವ ಸುಖ ದುಃಖಂಗಳು ಈ ಶರೀರಕ್ಕೆ ಸಂಬಂಧಮಾಗಿಹವು. ಜನನದಲ್ಲಿ ಸ್ಥೂಲಶರೀರವೇ ತಥ್ಯ, ಮರಣದಲ್ಲಿ ಸ್ವಪ್ನ ಶರೀರವೇ ತಥ್ಯ, ಈ ಸ್ಥೂಲ ಶರೀರ ಕರ್ಮ ಇಂದ್ರಿಯ ಮುಖಂಗಳಲ್ಲಿ ಆ ಭಾವಶರೀರಕ್ಕೆ ಲೇಪನಮಾಗುತ್ತಿರ್ಪಲ್ಲಿ, ಅದು ಸ್ಥೂಲಮಾದಲ್ಲಿ, ಇದು ಲಯಮಪ್ಪುದು. ಇಂದ್ರಿಯಂಗಳು ಈ ಶರೀರದಲ್ಲಿ ಸಾಕಾರಮಾಗಿ ಆ ಶರೀರದಲ್ಲಿ ನಿರಾಕಾರಮಾಗಿ ಹೊಂದಿರ್ಪವು. ಇಂದ್ರಿಯ ಸಂಬಂಧಮಾದ ವಿಷಯ ವ್ಯಾಪಾರಂಗಳು ಮನಸ್ಸಹೊಂದಿ ಅನುಭವಕ್ಕೆ ಬರುತ್ತಿರ್ಪಂತೆ ಶರೀರಸಂಬಂಧವಾದ ಪುತ್ರ ಕರ್ಮಂಗಳು ಪರದಲ್ಲಿ ಸ್ವಪ್ನರೂಪಮಾದ ಕಾರಣ ಶರೀರಕ್ಕೆ ಅನುಭವನೀಯಮಾಗಿ ಇಹುದು. ಆಕಾಶದಲ್ಲಿ ಇರ್ಪ ಸೂರ್ಯಪ್ರಭೆಯಿಂ ಪೃಥ್ವಿ ಪ್ರಕಾಶಮಾಗಿರ್ಪಲ್ಲಿ ಅದೇ ಪೃಥ್ವಿಯಲ್ಲಿರ್ಪ ರಸಪಾನಂಗಳಂ ಮಾಡಿ ಅದೇ ಜಡಮಯಮಾದ ಮೇಘಮಾದಲ್ಲಿ ಪೃಥ್ವಿ ಆಕಾಶಂಗಳೊಂದಕ್ಕೊಂದು ಕಾಣಿಸದಿರ್ಪಂತೆ ಭಾವ ಶರೀರವ ಹೊಂದಿ ತೇಜೋಮಯವಾಗಿ ಭ್ರಮಿಸುತಿರ್ಪ ಜೀವನ ಪ್ರಕಾಶದಲ್ಲಿ ಜಾಗ್ರ ಸ್ವಪ್ನಂಗಳೊಂದೆಯಾಗಿಪ್ಪವು. ಈ ಶರೀರದಲ್ಲಿ ಇಪ್ಪ ಅಶನಾದಿ ರಸಂಗಳ ಆ ತೇಜಸ್ಸು ಕೊಂಡಲ್ಲಿ ಅದೆ ಜಡರೂಪಮಾದ ತಮಸ್ಸಾಗಿ ಜೀವನ ಸ್ಥೂಲ ಕಾಣಿಸದೆ ಜೀವನು ಕಾರಣದಲ್ಲೆ ವರ್ತಿಸುತ್ತಿಹನು. ಆ ಮೇಲೆ ವ್ಯಾನವಾಯುಮುಖದಿಂ ಶರೀರಕೂಪಂಗಳಲ್ಲಿ ಆ ರಸವು ವಿಸರ್ಜನದಲ್ಲಿ ಆವರಣವಳಿದು ಜಾಗ್ರಮಾಗುತ್ತಿರ್ಪುದು. ಅಂತಪ್ಪ ಸುಷುಪ್ತಿಯ ಹೊಂದಿರ್ಪ ಜೀವನಿಗೆ ಉಪಾಧಿಯಿಂ ಜಾಗ್ರಮುದ್ಭವಿಸುವದೆಂತೆಂದಡೆ: ಪೃಥ್ವಿರೂಪಮಾದ ವಾಸನೆಯಿಂ ಜಾಗ್ರಮುದಿಸದು, ವಾಯುರೂಪಮಾದ ಸ್ಪರ್ಶನದಿಂದಲು ಆಕಾಶರೂಪಮಾದ ಶಬ್ದದಿಂದಲು ಮುಗುಲು ಹರಿದು ಜಾಗ್ರಮುದಿಸುತ್ತಿರ್ಪುದು. ಶರೀರದಲ್ಲಿ ಸಾಕಾರರೂಪಮಾದ ಇಷ್ಟಲಿಂಗ, ಕಾರಣದಲ್ಲಿ ವಿವೇಕರೂಪಮಾದ ಭಾವಲಿಂಗ, ಸೂಕ್ಷ್ಮದಲ್ಲಿ ಮಂತ್ರರೂಪಮಾದ ಪ್ರಾಣಲಿಂಗ, ಭಜಿಸಿದಲ್ಲಿ, ಆ ಸೂಕ್ಷ್ಮದಲ್ಲಿರ್ಪ ತಮಸ್ಸೆಂತಳಿವುದೆಂದಡೆ: ವಿಷಯರೂಪಮಾದ ತಮಸ್ಸು ಮಂತ್ರದಿಂದೆಂತಳಿವುದೊ ಅಂತಳಿದಲ್ಲಿ ಸಾಕಾರ ನಿರಾಕಾರಂಗಳೊಂದೆಯಾಗಿ, ಜನನ ಮರಣ ಭ್ರಾಂತಿಯಡಗಿ ಇದ್ದಂತಿರ್ಪ ಸ್ಥಿತಿಯೆ ಮಹಾಲಿಂಗ. ಅಂತಪ್ಪ ಮಹಾಲಿಂಗವೆ ನಾನಾಗಿರ್ಪ ನಿಜಾನಂದ ಸುಖವನೆನಗಿತ್ತು ಸಲಹಾ ಮಹಾಘನ ದೊಡ್ಡದೇಶಿಕಾರ್ಯ ಪ್ರಭುವೆ.