Index   ವಚನ - 6    Search  
 
ಮತ್ತಂ, ಅಲ್ಲಿಂದ ಲಿಂಗಮೂರ್ತಿಯ ಕರಸ್ಥಲಕ್ಕೆ ಬಿಜಯಂಗೈಸುವ ವಿವರ: ಲಿಂಗಮಸ್ತಕದಲ್ಲಿ ಅಂಗುಷ್ಠವನ್ನಿಟ್ಟು, ಆಧಾರದಲ್ಲಿ ಅನಾಮಿಕ ಮಧ್ಯಾಂಗುಲವ ಮಡುಗಿ, ಕನಿಷ್ಠತರ್ಜನಿಗಳ ಎಡಬಲಕೆ ನಿಲ್ಲಿಸಿ, ಲಿಂಗಮೂರ್ತಿಯ ಸಾವಧಾನಭಕ್ತಿಗಳಿಂದ ವಾಮಕರಸ್ಥಲ ಪಾಣಿತಾಣಕ್ಕೆ ಬಿಜಯಂಗೈಸಿ, ಆ ಲಿಂಗದೇವನ ಸಮರಸಾನಂದ ನಿಜಾನುಭಾವದಿಂದ ಹನ್ನೆರಡುವೇಳೆ ಜಿಹ್ವೆಪ್ರಕ್ಷಾಲನಂಗೆಯ್ಸಿ, ದ್ವಾದಶಾಂಗುಲ ಅಷ್ಟಾಂಗುಲ ಷಡಂಗುಲದೊಳಗೆ ಮಧುರ ಒಗರು ಖಾರ ಆಮ್ಲ ಕಹಿ ಮೊದಲಾದ ಕಾಷ್ಠದೊಳಗೆ ಅಯೋಗ್ಯವಾದ ಶುಷ್ಕಕಾಷ್ಠವಂ ಬಿಟ್ಟು, ಯೋಗ್ಯವಾದಂಥಾದ್ದರೊಳಗೆ ದೊರೆದಂಥಾದ್ದೊಂದು ಕಾಷ್ಠವನು ಆ ಪಾದೋದಕಸ್ಪರ್ಶನದಿಂದೆ ಪವಿತ್ರವೆನಿಸಿ, ಜಂಗಮಕ್ಕೆ ಕೊಟ್ಟು ತಾ ಕೊಂಡಂಥಾದ್ದೆ ಪ್ರಸಾದವೆನಿಸುವುದು. ಆ ಪ್ರಸಾದವನ್ನು ಲಿಂಗಸ್ಪರ್ಶನದಿಂದೆ ದಂತಪಂಕ್ತಿಗಳ ತೀಡಿ, ಹಸ್ತಾಂಗುಲಿ ಪಾದಾಂಗುಲಿಗಳಂ ತೀಡಿದ ಮೇಲೆ ಒಡೆದು ಎರಡು ಭಾಗವ ಮಾಡಿ ಜಿಹ್ವೆಯ ಪವಿತ್ರವಾಗಿ ಹೆರೆದು, ಆ ನಿರ್ಮಾಲ್ಯವ ನಿಕ್ಷೇಪಸ್ಥಲದಲ್ಲಿ ಹಾಕಿ, ಮುಖಮಜ್ಜನವ ಮಾಡಿ, ಬಚ್ಚಬರಿಯಾನಂದಲೋಲಾಬ್ಧಿಯಲ್ಲಿರ್ಪುದೆ ನಿರವಯಪ್ರಭು ಮಹಾಂತ ತಾನೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.