Index   ವಚನ - 28    Search  
 
ನಿರವಯರ್ಪಿತವಾದ ತದನಂತರದೊಳು ಚಿದ್ಭಸ್ಮಧಾರಣಂಗೈದು, ಸರ್ವೋಪಚಾರವನುಳಿದು, ಪತ್ರಿ ಪುಷ್ಪಗಳ್ಯಾವುದಾದರೂ ಒಂದೇ ಧರಿಸಿ, ತನ್ನ ಹೃನ್ಮಂದಿರದಲ್ಲಿ ನೆಲೆಸಿರುವ ವಸ್ತುವು ಬೇರೆ, ನಾ ಬೇರೆಂಬ ಉಭಯಭಾವಮಂ ಭಾವಸ್ಥಲ ಮನಸ್ಥಲ ಕರಸ್ಥಲ ಪರಿಪೂರ್ಣಸ್ಥಲವ ಕಾಣದೆ ಇದ್ದಾಗೆ ಸರಿಮಾಡಿ, ಈ ತತ್ಸಮಯವೆಂತಾಯಿತೆಂದೊಡೆ: ಕ್ಷೀರ ಕ್ಷೀರ ಕೂಡಿದಂತೆ, ಘೃತ ಘೃತ ಕೂಡಿದಂತೆ, ಜ್ಯೋತಿ ಜ್ಯೋತಿ ಒಂದಾದಂತೆ, ಉದಕ ಉದಕವ ಕೂಡಿದಂತೆ, ಕೇವಲ ಅಂಗ ಲಿಂಗದಲ್ಲಿ ಲಿಂಗಗುರುಚರಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರವೆಂಬ ಚಿದಾಬ್ಧಿಸಂಗ ಚಿದ್ಬೆಳಗಿನ ಸಮರಸದಲ್ಲಿ ಆ ಸಮರಸಪರಮಾಣುಮಹಾಂತದೈಕ್ಯದಲ್ಲಿ ಆ ಐಕ್ಯ ನಿರವಯಬ್ರಹ್ಮವೆಂಬ ಕುರುಹು ನಷ್ಟವಾಗಿ, ತಾನೆ ತಾನಾದಂತೆಯೆಂದು, ಒಳಹೊರಗೆನ್ನದೆ, ಈ ಕೂಟವೆ ನಿರಂಜನ ಚಿನ್ಮಯರೂಪ ಘನಗಂಭೀರ ಜಂಗಮಮೂರ್ತಿ ಭಾವಲಿಂಗಾರ್ಚನೆ ಇದೆಯೆಂದು, ಮಹಾಜ್ಞಾನ ಪರಿಪೂರ್ಣಾನುಭಾವದಿಂದ ಪರಮಕಾಷ್ಠಿಯನೈದು, ಹಿಂದುಮುಂದಣ ಭವಮಂ ನೀಗಿ, ತನ್ನ ಘನಮನೋಲ್ಲಾಸ ನಿಜನೈಷ್ಠೆ ಬೆಳಗೆ, ಅಷ್ಟವಿಧಾರ್ಚನೆ ಷೋಡಶೋಪಚಾರವಾಗಿ, ಭಕ್ತಜಂಗಮವೆಂಬುಭಯವಳಿದುಳಿದು ನಿಂದ ನಿರ್ವಾಣಪದಸ್ಥಾನಿಗಳೆ ನಿರವಯಪ್ರಭು ಮಹಾಂತರೆಂದವರಲ್ಲಿ ಅಚ್ಚೊತ್ತಿದಂತಿರ್ಪರು ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.