Index   ವಚನ - 56    Search  
 
ಶಿವಲಿಂಗಸಂಗವಾಗಿ, ಆ ಲಿಂಗದ ಕೂಟವನರಿಯದೆ, ಹಾದರಕೆ ಹುಟ್ಟಿದ ಹೊಲಿಕರ್ಮ ಹಠಜೀವಿ ಶೈವಪಾಶಂಡಿ ಷಣ್ಮತದವರಂತೆ ವರ್ತಿಸುವರ ಮರಣಸೂತಕನಿರಸನದ ವಚನಸೂತ್ರವದೆಂತೆಂದೊಡೆ: ಶ್ರೀಗುರುವಿನ ಹೃತ್ಕಮಲದಲ್ಲಿ ಉದಯವಾಗಿ ಚಿತ್ಪಿಂಡವ ಧರಿಸಿ, ಜಂಗಮಲಿಂಗ ಲಿಂಗಜಂಗಮಮೂರ್ತಿಯಾದ ಶಿವಶರಣರ ಸಂಗದಲ್ಲಿ ಬೆಳೆದು, ನಿಜೇಷ್ಟಲಿಂಗದಲ್ಲಿ ಲೀಯವಾದ ಗುರುಚರಭಕ್ತಾಂಗನೆಯರು ತಾವು ಸಾಕಾರಸೃಷ್ಟಿಗೆ ಬರುವಾಗ, ನಿಃಕಲಪರಶಿವಕೃಪಾನಂದ ಸಾಕಲ್ಯಸಾವಯನಿರವಯವೆಂಬ ತ್ರಿವಿಧಕೃತಿ ಷಟ್ಕೃತಿಯಾಗಿ, ನಿಜಾನಂದವಿಡಿದು, ಶ್ರುತಿಗುರುಸ್ವಾನುಭಾವ ವೇಧಾಮಂತ್ರ ಕ್ರಿಯದಾಚರಣೆಸಂಬಂಧನಿಲುಕಡೆಗಳೆಂಬ ಷಟ್ಸ್ಥಲಸಂಪದದ ಸ್ವಾನುಭಾವಸೂತ್ರವಿಡಿದು, ಘನಗುರು ನಿರೂಪಣದಿಂದ ಸತ್ಯಶುದ್ಧ ನಡೆನುಡಿಸಂಪನ್ನ ಸದ್ಧರ್ಮ ಸ್ಥೂಲಸೂಕ್ಷ್ಮಗಳಡಿಮೆಟ್ಟಿ ನಿಂದ ಕಾರಣಿಕರೆಂದು ಶೈವದಿಂದ ಹೊಗಳಿಸಿ, ಸಕಲಶಾಸ್ತ್ರಾಗಮ ಪುರಾಣ ಸಾಕ್ಷಿಗಳಾಗಿ, ಇಹ-ಪರ, ಪುಣ್ಯ-ಪಾಪ, ಸುಖ-ದುಃಖ, ಸ್ತುತಿ-ನಿಂದೆ, ಧರ್ಮ-ಕರ್ಮ, ವೀರಶೈವ-ಶೈವ, ಭವಿ-ಭಕ್ತ, ಆಚಾರ-ಅನಾಚಾರ, ಹೆಣ್ಣು-ಗಂಡು, ಸಿರಿ-ದರಿದ್ರ, ಸ್ಥೂಲ-ಸೂಕ್ಷ್ಮಕ್ಕೆ ಕಾರಣವತಾರ್ಯ ಸಾಕ್ಷಿಕರಾಗಿ, ಬಂಧಮೋಕ್ಷಂಗಳಿಗೆ ಹೊದ್ದಿಯೂ ಹೊದ್ದದೆ, ಪೂಜಾಪೂಜಕತ್ವವೆಂಬ ಸಂದುಸಂಶಯದಾಲಯವ ಸ್ಥಿರಗೊಳಿಸದ ತಮ್ಮ ತಾವರಿದು ಜನ್ಮ ಜರಾ ಮರಣದ ಕಾಲಕಾವರೆಡೆಯಾಟವ ಮರೆದು, ನಿತ್ಯಮುಕ್ತಾಂಗನಾಭರಣರಾಗಿ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪವೆಂಬ ಸಲ್ಲಕ್ಷಣದೊಡನೆ ನಿರವಯ ಅನಾದಿಶರಣ ಚಿದ್ಘನನಿರೂಪಣವಿಡಿದು ಬಂದ ಮಣಿಹವ ಮತ್ತಾ ಚಿದ್ಘನಗುರುವಿಗೊಪ್ಪಿಸಿ, ಸಂತೃಪ್ತಿಯಿಂದ ಮತ್ತೆಂದಿನಂತೆ ನಿರವಯ ಲೀಲೆಯ ಧರಿಸುವಾಗ, ಸಾಕಾರವಾದ ಪಾದೋದಕ ಪ್ರಸಾದ ಮಂತ್ರವೆಂಬ ಅಂಗ, ನಿರಾಕಾರವಾದ ಪಾದೋದಕ ಪ್ರಸಾದ ಮಂತ್ರವೆಂಬ ಲಿಂಗ, ‘ಯದೃಷ್ಟಂ ತನ್ನಿಷ್ಟಂ’ ಎಂಬ ಶ್ರುತಿ ಗುರುಪ್ರಮಾಣದಿಂದ, ಎಲ್ಲಿ ಹುಟ್ಟಿದಂಥದ್ದೆಲ್ಲ ಅಲ್ಲಿ ಲಯವೆಂಬ ನೀತಿಯೊಳ್ ಸದ್ರೂಪವಾದ ಸಮಾಧಿ, ಚಿದ್ರೂಪವಾದ ನಿರಂಜನಮಂತ್ರದಲ್ಲಿ ಬಯಲಾದ ಘನಲಿಂಗೈಕ್ಯರ ಮತ್ತುಳಿದ ಘನಲಿಂಗಸಂಗಿಗಳು ತಮ್ಮಂಗ ಮನ ಪ್ರಾಣವೆಂಬ ತ್ರಿವಿಧಸ್ಥಾನದಲ್ಲಿ ಸ್ವಾನುಭಾವಜ್ಞಾನಾನಂದದರಿವಿನೊಳು ಸಗುಣ ನಿರ್ಗುಣ ಕ್ರಿಯಾಚಾರ ಜ್ಞಾನಾಚಾರ ಭಾವಾಚಾರವೆಂಬ ಸಾವಧಾನದಿಂದ ರೂಪಾದ ಕಾಯಸಂಬಂಧ ದ್ರವ್ಯವ ಕ್ರಿಯಾರ್ಪಣವಮಾಡಿ, ರುಚಿಯಾದ ಕರಣಸಂಬಂಧದ್ರವ್ಯವ ಜ್ಞಾನಾರ್ಪಣವಮಾಡಿ, ತೃಪ್ತಿಯಾದ ಭಾವಸಂಬಂಧದ ದ್ರವ್ಯವ ಮಹಾಜ್ಞಾನಾರ್ಪಣವಮಾಡಿ, ಪರಿಪೂರ್ಣಜ್ಯೋತಿರ್ಮಯ ಪರಮಾಣುಲಿಂಗದಲ್ಲಿ ಸಂದುಸಂಶಯ ಹಿಂದು ಮುಂದಣ ಆಸೆ ಆಮಿಷವನಳಿದುಳಿದ ಪರಿಪೂರ್ಣಾಂಗ ಲಿಂಗಾಚಾರ ಸಂಧಾನ ಪರಿಪೂರ್ಣ ಶಕ್ತಿ ಭಕ್ತಿ ಶುಚಿ ರುಚಿ ಪರಿಪೂರ್ಣ ಸುಹಸ್ತ-ಮುಖ, ನಡೆ-ನುಡಿ ಪರಿಪೂರ್ಣ ಪದಾರ್ಥ- ಪ್ರಸಾದ ಪಾದೋದಕ ಪ್ರಸಾದ ಮಂತ್ರಾನಂದದ ಬೆಳಗಿನಲ್ಲಿ ನಿತ್ಯ ತೃಪ್ತಿ ಭವಭೂಜಕುಠಾರರಾಗಿರ್ಪುದೆ ಪ್ರಮಥಗಣಂಗಳ ಸದ್ಧರ್ಮಮಾರ್ಗದ ಸತ್ಯಶುದ್ಧ ನಡಾವಳಿಗಳು. ಇಂತೆಸೆವ ಘನಮಾರ್ಗವನುಳಿದು, ಲೋಕದ ಕರ್ಮಿಗಳಂತೆ ನಮ್ಮ ಗುರುವು-ಜಂಗಮವು, ತಂದೆ-ತಾಯಿ ಸತಿ-ಸುತ-ಒಡಹುಟ್ಟಿದರು ಸತ್ತರು ನಮಗೆ ಗತಿಯಾವುದೆಂದು, ಲಿಂಗಜಂಗಮದಾರ್ಚನಾರ್ಪಣಗಳನುಳಿದು, ಶೋಕಾಗ್ನಿಯ ಜ್ವಾಲೆಯನೆಬ್ಬಿಸಿ ಮಹಾದುಃಖಾಬ್ಧಿಯಲ್ಲಿ ಮುಳುಗಾಡುತ್ತ ಅಂದಮಾಡಿ, ಗುಂಟಿಕೆಯನಿಕ್ಕಿ, ಗೂಟವ ಬಡಿದು, ಶಿವಾನಂದಲೋಲುಪ್ತಿಯೆಂಬ ಸ್ತೋತ್ರಧ್ಯಾನ ಮಂಗಳಾರತಿ ಪುಷ್ಪಪತ್ರಿಯ ಘನಸನ್ಮಾನ ನಿಜೋತ್ಸಾಹದ ಕೈವಲ್ಯ ಶುಭಸಂತೋಷವನರಿಯದೆಅಯ್ಯಯ್ಯ ಅಪ್ಪಪ್ಪ ಅವ್ವವ್ವ ಅಣ್ಣಣ್ಣ ಅಕ್ಕಕ್ಕ ಮಗಳೆ ಮಗಳೆ ಮಗನೆ ಮಗನೆ ಗುರುವೆ ಗುರುವೆ ಸ್ವಾಮಿ ಸ್ವಾಮಿ ಹೇಂಗೆ ನಿಮ್ಮ ಕಳಕೊಂಡು ಹೇಂಗೆ ಜೀವಿಸಲೆಂದು ಲಿಂಗಸಾವಧಾನವನುಳಿದು, ಬೊಬ್ಬೆಯ ಹೊಡೆಹೊಡೆದು, ಎದೆ ಎದೆಯ ಬಡಿವಡಿದು, ಕಿರಾತರಂತೆ ಮಣ್ಣಿನೊಳು ಮುಚ್ಚಿ ಗುಟ್ಟಿಯ ಮಾಡಿ, ಪ್ರತುಮೆಗಳನಿಟ್ಟು ಪೂಜಿಸಿ, ತಾನನಾದಿಲಿಂಗಮಂತ್ರಭೋಗೋಪಭೋಗದೊಡನೆ ಸಲಿಸುವ ತೀರ್ಥಪ್ರಸಾದವ ತೋರಿ, ವಸ್ತ್ರಾಭರಣಗಳನಿಟ್ಟು, ಕುಂಡಗೋಳಕರಂತೆ ನಿಜಸಂಗನ ನಿಲವನರಿಯದೆ ಸತ್ತದಿನ ಮೂರು ಐದು ಒಂಬತ್ತು ತಿಂಗಳು ವರುಷ ಹನ್ನೆರಡುವರುಷ ಪರಿಯಲ್ಲಿವಿಡಿದು ಲಿಂಗಬಾಹ್ಯರಂತೆ ಎಡೆ ಹುಡಿಯನುಟ್ಟು ಪರಮಾನ್ನ ಪಾಯಸಗಳ ಮಾಡಿ, ಕೊಡಗಳನಿಟ್ಟು ಪೂಜಿಸಿ, ಘನಗುರುಲಿಂಗಜಂಗಮದ ತೀರ್ಥವ ತೋರಿ, ಸುಳಿಬಾಳೆ ಎಲಿಯ ಹಾಸಿ, ದೇವಾದಿದೇವರದೇವಜಂಗಮಕ್ಕೆ ಅಲ್ಪಸ್ವಲ್ಪ ನೀಡಿ, ಆ ಸುಳಿಬಾಳೆ ಎಲಿಯೊಳಗೆ ಮಿತಿತಪ್ಪಿ, ಪಶುವಿನ ಮುಂದೆ ಇಟ್ಟಹಂಗೆ ಮಡುಗಿ, ತಮ್ಮ ಹೆತ್ತವರ ಸತ್ತವರ ಹೆಸರುಗೊಂಡು ಗಂಡ ಗುರುಲಿಂಗಜಂಗಮಪ್ರಸಾದಿಯಾಗಿ, ಹೆಂಡತಿ ಮಕ್ಕಳೊಡಹುಟ್ಟಿದರೆಲ್ಲ ಶ್ರೀಗುರುವಿತ್ತ ಲಿಂಗವಿಲ್ಲದವರು ಕೆಲರು, ಲಿಂಗವ ಕಟ್ಟಿಕೊಂಡವರು ಕೆಲರು, ಆ ಸತ್ತವರ ನೆನಹಿನಿಂದ ಸಮಸ್ತ ಉಪಚಾರವ ಮಾಡಿ, ಆ ನೆನಹಿಂದುಳುಮೆಯಾದ ಮನದುಷ್ಟವ ಒಂದೊತ್ತು ಉಪವಾಸವ ಮಾಡಿ ಮನವೆಲ್ಲ ಸತ್ತವರೊಡಗೂಡಿ, ಲಿಂಗನೈವೇದ್ಯವ ಮಾಡಿದೆವೆಂಬುದೆ ಶುದ್ಧ ಅನಾಚಾರಕ್ರಿಯೆಯು. ಉಳಿದ ಪಿತ ಮಾತೆ ನೆಂಟತನದ ಗುರುಹಿರಿಯರೆಂದು ಒಡಲುಪಾಧಿವಿಡಿದು, ಉದರಪೋಷಣಕ್ಕೆ ಹೋಗಿ, ಆ ಸತ್ತ ಹೊಲೆಕರ್ಮದ ಅನಾಚಾರವ ನೋಡಿ, ಅನುಸರಿಸಿ, ತನ್ನ ಚಿತ್ಪ್ರಭಾಪುಂಜರಂಜಿತ ಪ್ರಸನ್ನತೆ ಪ್ರಸಾದೋದಕವ ಕೊಟ್ಟು ಏಕಸಮರಸವ ಮಾಡಿ ಸತ್ಯಶುದ್ಧ ನಡೆನುಡಿಯುಳ್ಳ ಭಕ್ತಗಣಂಗಳಿಗೆ ಭಿನ್ನ ಬಿಡುಗಡೆಯಿಂದ ಕರೆದೊಯ್ದು, ಭಾಜನಂಗಳೊಂದೊಂದ ಕಂಚಿನ ಹಿತ್ತಾಳಿಗಳಲ್ಲಿ ಮಾಡಿ, ಆಚಾರಸಂಪನ್ನರಿಗೆ ತಟ್ಟು ಮುಟ್ಟು ಸೋಂಕುಗಳ ಕಲ್ಪಿಸಿ, ಅನಾಚಾರಸಂಪನ್ನರಿಗೆ ಭಿನ್ನವಿಲ್ಲದೊಡಗೂಡಿರ್ಪುದೆ ಭವಕರ್ಮಿಗಳ ನಡಾವಳಿಯು. ಇವರಿಗೆ ಉಪದೇಶವ ಮಾಡಿ ಲಿಂಗವಕೊಟ್ಟು, ಭಕ್ತ ಮಹೇಶ ಪ್ರಸಾದಿಗಳೆಂದು ಬೊಗಳುವವರಿಗೆ ಶ್ರೀ ಮಹಾಘನ ಜ್ಯೋತಿರ್ಮಯ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪಾದೋದಕಪ್ರಸಾದ ಮುಕ್ತಿಯೆಂಬುವುದೆಂದಿಗೂ ಇಲ್ಲ. ನರಕಜೀವಜನ್ಮವೆ ಪ್ರಾಪ್ತಿಯಾಗಿ ಕಾಲ ಕಾಮ ಮಾಯೋಚ್ಛಿಷ್ಟ ಪ್ರಾಣಿಗಳಾಗಿ, ದುಃಖಾಬ್ಧಿಯಲ್ಲಿ ವಾಸವಾಗಿರ್ಪುದೆಂದಿಗೂ ಬಿಡದು ಕಂಡ್ಯಾ. ಶಾಂಭವಿಗೆ ಬೋಧಿಸಿದ ಹರನಿರೂಪಣ ಸಾಕ್ಷಿ: ಯೋ ಗುರುಃ ಮೃತಭಾವೇನ ಯದಾ ಶೋಚ್ಯತಿ ತದ್ದಿನಂ | ಗುರುಲಿಂಗಪ್ರಸಾದಂ ಚ ನಾಸ್ತಿ ಯಸ್ಯ ವರಾನನೆ || ತದ್ಧಿನಂ ದೂಷಿತಂ ತೇಷಾಂ ಶೋಣಿತಂ ಸುರಾಮಾಂಸಯೋಃ | ಏಕಭುಕ್ತ್ಯುಪವಾಸೇನ ನರಕೇ ಕಾಲಮಕ್ಷಯಂ || ಯದ್ಗೃಹೇ ಅನ್ಯದೇವೋಸ್ತಿ ತದ್ಗೃಹಾಣಿ ಪರಿತ್ಯಜೇತ್ | ಯದ್ಗೃಹೇಷು ಭವಿಪ್ರಾಪ್ತೇ ಸದ್ಗೃಹಾಣಿ ಪರಿತ್ಯಜೇತ್ || ತಿಲಷೋಡಶಭಾಗೇನ ತೃಣಾಗ್ರಬಿಂದುರುಚ್ಯತೇ | ಅಣುಗಾತ್ರಪ್ರಯೋಗೇನ ರೌರವಂ ನರಕಂ ವ್ರಜೇತ್ || ಅಸಂಸ್ಕಾರಿಕೃತಂ ಪಾಕಂ ಶಂಭೋರ್ನೈವೇದ್ಯಮೇವ ಚ | ಅನಿವೇದಿತಂತು ಭುಂಜಂತಿ ಪ್ರಸಾದಂ ನಿಷ್ಪಲಂ ಭವೇತ್ || ಅನಾಚಾರಿಕೃತಂ ಪಾಕಂ ಲಿಂಗನೈವೇದ್ಯ ಕಿಲ್ಬಿಷಂ | ಲಿಂಗಾಚಾರಿಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ || ಭವಿಹಸ್ತಕೃತಂ ಪಾಕಂ ಲಿಂಗನೈವೇದ್ಯಕಿಲ್ಬಿಷಂ | ಭಕ್ತಹಸ್ತಕೃತಂ ಪಾಕಂ ಲಿಂಗನೈವೇದ್ಯಮುತ್ತಮಂ ||'' ಇಂತೆಂದುದಾಗಿ, ಹರಗುರುವಾಕ್ಯವ ಮೀರಿ, ಭವಿಶೈವ ಹೊಲೆಕರ್ಮಿಗಳ ಮರಣಸೂತಕದುಃಖಾಬ್ಧಿಯಲ್ಲಿ ಮುಳುಮುಳುಗಾಡಿ, ಹೇಸಿಕೆಯಲ್ಲದೆ ನಾವು ಷಟ್ಸ್ಥಲಬ್ರಹ್ಮೋಪದೇಶಿಗಳೆಂದು ಅನಾಚಾರವನನುಸರಿಸಿ, ಒಡಲುಪಾಧಿವಿಡಿದು, ನಿಜವನರಿಯದೆ, ಭ್ರಾಂತುಭ್ರಮಿತರಾಗಿ, ತನು ಮನ ಘನ ನೆನಹುಗೆಟ್ಟು ಮತಿ ಮಸಳಿಸಿರ್ಪುದೆ ಪಂಚಮಸೂತಕ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.