Index   ವಚನ - 58    Search  
 
ಕಾಯದ ಕಳವಳದ ವಿಲಾಸವಿಭ್ರಮಣೆಗೊಂಡ ಮನಸೂತಕದಿರವದೆಂತೆಂದೊಡೆ: ಶ್ರೀ ಗುರುಪರಮಾರಾಧ್ಯ ಶಿಕ್ಷಾಕರ್ತನ ಕರುಣಕಟಾಕ್ಷೆಯಿಂದ ಮಾರ್ಗಸತ್ಕ್ರಿಯಾಚಾರ ಪ್ರಣಮಜಪಮಾಲೆ ಪರಿಪೂರ್ಣಾಚಾರ ಮಹಾಜ್ಞಾನ ಪ್ರಣಮಜಪಮಾಲೆ ಸಚ್ಚಿದಾನಂದ ಸರ್ವಾಚಾರ ಪ್ರಣಮದಿರವಂ ಪಡೆದು ನವದ್ವಾರದ ನವನಾಳ ನವಚಕ್ರ ನವಕೃತಿ ನವಸ್ಥಾನಂಗಳೊಳ್ ಚಿದ್ವಿಭೂತಿ ಚಿದ್ರುದ್ರಾಕ್ಷಿ ಚಿನ್ಮಂತ್ರಂಗಳಿಂದ ಕಾಲಮಾರನ ಮಾಯಾಪ್ರಪಂಚಿನಟ್ಟುಳಿಯು ಇಂದಿಂಗೆ ಹಿಂದಾಗಿ ಸರಿಬಿದ್ದಿತ್ತೆಂಬಂತೆ ನಿಜನೈಷ್ಠೆಯಿಂ ಮರೆದು ಹುಸಿದೇಹಮಾನವರು ಕೆಟ್ಟ ಭೋಗಾಭಿರತಿಯಿಂದೆ ಹುಸಿನಡೆಯ ನಡೆದು ಹುಸಿನುಡಿಯ ನುಡಿದು, ಗಣಸಮ್ಮೇಳಕ್ಕೆ ದೂರಸ್ಥನಾಗಿ, ತಾನು ಹೀನನೆನಿಸಿ, ಮತ್ತೊಬ್ಬರನು ಹಳಿದು, ಬರಿದೂಷಣೆಗೊಳಗಾಗಿ, ನಿಜಮುಕ್ತಿಮಂದಿರವೆಂಬ ಗೊತ್ತ ಸೇರದೆ, ಮರ್ಕಟನಂತೆ ಹಲವು ದೇವತೆ, ಹಲವು ಜಪತಪಾನುಷ್ಠಾನ, ಹಲವು ಶಾಸ್ತ್ರಾನುಭಾವ, ಹಲವರುಂಡುಟ್ಟು ಬಿಟ್ಟ ಧನಧಾನ್ಯ, ಹಲವರೆಂಜಲು ಗಂಧ ರಸ ರೂಪ ಸ್ಪರಿಶನ ಶಬ್ದ ಮೊದಲಾದ ಪಂಚವಿಷಯವೆಂಬ ಅತಿಯಾಸೆ ಆತುರತೆಯಿಂದ ಅಭಿಮಾನಗೆಟ್ಟು ಮತಿ ಮಸುಳಿಸಿ ಸ್ತುತಿನಿಂದೆಗಳಿಗೊಳಗಾಗಿ, ಗುರುಲಿಂಗಜಂಗಮ ವಿಭೂತಿ ರುದ್ರಾಕ್ಷಿ ಮಂತ್ರಂಗಳಿಂದ, ಎನ್ನ ಮನದಭೀಷ್ಟೆ ಕೈಸಾರಲಿಲ್ಲವೆಂದು ಸತ್ಕ್ರಿಯ ಸಮ್ಯಜ್ಞಾನ ಸದಾಚಾರ ಸದ್ವರ್ತನೆ ಷಟ್ಸ್ಥಲಮಾರ್ಗವ ಬಿಟ್ಟು ಮನೋವಿಲಾಸಿಯಾಗಿ ಕಳವಳದಿಂದಿಪ್ಪುದೆ ತನುವಿನೊಳಗಣ ಅಂತರಂಗದ ದ್ವಿತೀಯ ಮನಸೂತಕ ಕಾಣಾ, ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.