Index   ವಚನ - 60    Search  
 
ಪ್ರಾಣಕ್ಕೆ ತತ್ಪ್ರಾಣವಾದ ಜೀವಸೂತಕವದೆಂತೆಂದೊಡೆ: ಶ್ರೀಗುರು ತತ್ಪರಂಜ್ಯೋತಿರ್ಮಯ ಸಾಕ್ಷಾತ್ ನಿರ್ವಾಣಪದನಾಯಕ ಷಟ್ಸ್ಥಲ ಬ್ರಹ್ಮೋಪದೇಶವ ಕರುಣಕಟಾಕ್ಷೆಯಿಂದ ಲಿಂಗಕ್ಕೆ ಲಿಂಗೋಪದೇಶ, ಮನಕ್ಕೆ ಮಂತ್ರೋಪದೇಶ, ಪ್ರಾಣಕ್ಕೆ ನಿಜೋಪದೇಶ, ಜೀವಕ್ಕೆ ಜ್ಞಾನೋಪದೇಶದಿಂದ ಕಾಯ ಶುದ್ಧಪ್ರಸಾದವಾಯಿತ್ತು. ಮನ ಸಿದ್ಧಪ್ರಸಾದವಾಯಿತ್ತು, ಪ್ರಾಣ ಪ್ರಸಿದ್ಧಪ್ರಸಾದವಾಯಿತ್ತು, ಜೀವ ಪ್ರಸನ್ನಪ್ರಸಾದವಾಯಿತ್ತು. ಇನ್ನೆನಗೇತರ ಭಯವೆಂದು ಪರಮಪದದ ದೃಢತೆ ನೆಲೆಗೊಂಡು ಹಿಂದಣ ಪಾಪ ಮುಂದಣ ಭೀತಿಯ ಮರೆದು, ತನ್ನಷ್ಟತನುವೆ ಅಷ್ಟಾವರಣದಲ್ಲಿ, ಅಷ್ಟಾವರಣವೆ ತನ್ನಷ್ಟಾಂಗದಲ್ಲಿ ಕೂಟಸ್ಥವಾಗಿ, ಭಿನ್ನದೋರದೆ ತಾನುತಾನಾಗಿ ನಿಜಮುಕ್ತಿಮಂದಿರವ ಹೊಕ್ಕು, ಮೇಲೆ ಇಹಲೋಕದ ಭೋಗ ಪರಲೋಕದ ಮೋಕ್ಷನಾಗಬೇಕೆಂದು ಅಷ್ಟವಿಧಾರ್ಚನೆ ಷೋಡಶೋಪಚಾರಗಳಿಂದ ಗುರುಪೂಜೆ ಲಿಂಗಾರಾಧನೆ ಜಂಗಮಾರಾಧನಾರ್ಪಣವ ಮಾಡಬೇಕೆಂದು ಅರ್ಪಿತಾವಧಾನವ ತೊರೆದು ಉಪಚಾರಗಳಿದ್ದಲ್ಲಿಗೆ ಹೋಗಿ ಬೇಡಿ ಬೇಡಿ ಕಾಡಿ ಕಾಡಿ, ಕೊಟ್ಟರೆ ಸ್ತುತಿಸಿ, ಕೊಡದಿದ್ದರೆ ನಿಂದ್ಯಕ್ಕೊಳಗಾಗಿ, ಹರಿಯೊ ಮೊರೆಯೊಯೆಂದು ರಿಣಪಾತಕರಾಗಿ, ಆಡಂಬರಾರಾಧನೆಗಳ ಮಾಡಿ, ಈ ರಿಣ ಎಂದಿಗೆ ಹೋದೀತೋ ಗುರುವೆಯೆಂದು ಜಡೆಮುಡಿಗಳ ಬಿಟ್ಟು ಕ್ಷೀಣಾತ್ಮರಿಗೆ ಹೇಳಿ ಕರಗಿ ಕೊರಗಿ ಶೀತೋಷ್ಣಾದಿಗಳ ಬಾಧೆಗಳ ದೆಸೆಯಿಂದ ಪ್ರಮಥಾಚಾರವ ಮರೆದು ಭವರೋಗಿಯಾಗಿರ್ಪುದೆ ಚತುರ್ಥದಲ್ಲಿ ಪ್ರಾಣದೊಳಗಣ ಅಂತರಂಗದ ಜೀವ ಸಂಕಲ್ಪಸೂತಕವಿದೀಗ ಪೂರ್ವಕರ್ಮಕೃತ್ಯ ಕಾಣಾ ನಿರವಯಪ್ರಭುಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.