ಆ ಕಲಕೇತಯ್ಯಗಳು ಗುಪ್ತಪಾತಕಸೂತಕದ
ಅನಾಚಾರದಭ್ರಜಯಾಮಾರುತನಾಗಿ ಖಂಡ್ರಿಸಿ ನುಡಿದ
ನಿರೂಪಣವೆಂಬ ಮೋಡವನೋಡಿಸಿ ಪವಿತ್ರರೆನಿಸುವ
ನಿಮಿತ್ಯಾರ್ಥ ಮೊದಲಾದ ಅರೆಭಕ್ತರೆಲ್ಲ
ಒಂದೊಡಲಾಗಿ ಶರಣುಹೊಕ್ಕು,
ಹಸ್ತಾಂಜಲಿತದೊಳ್ ನಿಂದು, ದೃಢಭಕ್ತಿಯಿಂದ ಹದುಳಿಗರಾಗಿ,
ಮೃದುತರ ಕಿಂಕರನುಡಿಗಳಿಂದ ನುಡಿದ ಪ್ರತ್ಯುತ್ತರ:
ಹರಹರ ಹಿಂದೆ ತಪ್ಪಿ ನಿಮ್ಮ ಘನಾಚಾರ ಸನ್ಮಾರ್ಗವ ಬಿಟ್ಟು,
ಪರಮಪಾತಕ ಸೂತಕವಾಚರಿಸಿದಕ್ಕೆ ಎಡವಿಬಿದ್ದು,
ಪ್ರಮಥಗಣಾಜ್ಞೆಗಳೊಳಗಾಗಿ, ಭವಸಮುದ್ರವ ದಾಂಟಿ,
ಇನ್ನು ತಪ್ಪಿದರೆ ನಮ್ಮ ಪ್ರಮಾಣವೆ ನಮಗೆ ಮೃತ್ಯುವಾಗಿ,
ಸದ್ಧರ್ಮವ ಸೇರದಂತೆ ಸಾಕ್ಷಿಯಾಗಿರುವರು.
ಅವರಾರೆಂದೊಡೆ:
ಭಕ್ತಿಸ್ಥಲಕ್ಕೆ ಕಾರಣಿಕರು ಹಿರಿದಂಡನಾಥ,
ಮಹೇಶ್ವರಸ್ಥಲಕ್ಕೆ ಕಾರಣಿಕರು ವೀರಗಂಟೆ,
ಪ್ರಸಾದಿಸ್ಥಲಕ್ಕೆ ಕಾರಣಿಕರು ಮರುಳಶಂಕರತಂದೆಗಳು,
ಪ್ರಾಣಲಿಂಗಿಸ್ಥಲಕ್ಕೆ ಕಾರಣಿಕರು ಮುಗ್ಧಸಂಗಪ್ಪನವರು
ಶರಣಸ್ಥಲಕ್ಕೆ ಕಾರಣಿಕರು ಚಿಕ್ಕದಂಡನಾಥ,
ಐಕ್ಯಸ್ಥಲಕ್ಕೆ ಕಾರಣಿಕರು ಅಜಗಣ್ಣತಂದೆಗಳು,
ನಿರವಯಸ್ಥಲಕ್ಕೆ ಕಾರಣಿಕರು ಗುಹೇಶ್ವರ ಅಲ್ಲಮಪ್ರಭುಸಾಕ್ಷಿಯಾಗಿ,
ನಿಮ್ಮ ಸರ್ವಾಚಾರಸಂಪದಸ್ಥಲಕ್ಕೆ ಸಲ್ಲದಂತೆ
ಭವಜೀವಿಗಳಾಗಿ ಹೋಗುವುದಕ್ಕೆ
ನಮ್ಮ ಮೂಲ ಚಿತ್ತುವಿನಲ್ಲುದಯವಾದ
ಚಿದ್ಭ್ರಹ್ಮಮೂರ್ತಿ ಪರಶಿವಲಿಂಗಮಂತ್ರದಿರವು
ತೊಲಗುವುದೆ ಪ್ರಮಾಣು.
ಇದಕ್ಕೆ ಸಂದುಸಂಶಯವಿಲ್ಲವು.
ಅದೇನುಕಾರಣವೆಂದೊಡೆ:
ಹಿಂದೆ ಮಾಡಿದಂಥ ಪ್ರಮಥಗಣ ಬಿನ್ನಪದ ಕಕ್ಕಯ್ಯಗಳ
ನಿಜಮೋಕ್ಷದ ಪರಮಾಮೃತಪ್ರಸಾದ
ಜೇಡರ ದಾಸಯ್ಯಗಳ ಮಹದರುವಿನ
ಆಚಾರಪರಿಧಿಯಾದ ಪಾವುಡದ ಸಾಕ್ಷಿ.
ಶಿವಲೆಂಕಮಂಚಣ್ಣಗಳ ಜಪಮಾಲೆಯನೊಳಕೊಂಡರಿವಿನ ಶಿವದಾರ
ಘಟ್ಟಿವಾಳಪ್ಪನ ಚಿತ್ಪ್ರಭಾಪುಂಜರಂಜಿತಮಾದ
ಶ್ರೀಮದ್ಘನಭಸಿತವೆ ಸಾಕ್ಷಿ ಕಾಣಾ
ತಂದೆಗಳಿರಾಯೆಂದು ಶರಣುಹೊಕ್ಕು,
ಶ್ರೀಗುರುಲಿಂಗಜಂಗಮಗಣಾರಾಧ್ಯರಿಗೆ
ಪರಮಾನಂದಪ್ರಸಾದ ಸ್ಥಲಕುಳದನುವರಿದು
ಶರಣಸಂದೋಹದಿಂದ ಎಮ್ಮ ಕಾಯಾರ್ಪಣ
ಕರಣಾರ್ಪಣ ಭಾವಾರ್ಪಣ ಪರಿಣಾಮಾರ್ಪಣ
ಪರಿಪೂರ್ಣಾರ್ಪಣವೆಂಬ
ಅಭಿವೃದ್ಧಿಗೆ ಕಾರಣವೆಂಬ
ನೀವೇ ಗತಿ, ನೀವೇ ಮತಿ, ನೀವೇ ಹಿತ,
ನೀವೇ ಪಿತ, ನೀವೇ ಮಾತೆ,
ನೀವೆಮಗೆ ಸರ್ವಚೈತನ್ಯವಯ್ಯಾ,
ನೀವೆಮಗೆ ಅಭಿಮಾನವೆಂಬ ದಯಾಂತಃಕರಣವಿಟ್ಟು
ಭವಾರಣ್ಯವೆಂಬ ಪರಿಭವಬಾಧೆಗೆ ಹಿಂದಕ್ಕೆ ತಿರುಗದಂತೆ ಕೃಪೆಮಾಡಿ
ನಿಮ್ಮಿಷ್ಟಲಿಂಗದ ಕಳೆ ಕ್ರಿಯಾಚಾರ ಶುದ್ಧಪ್ರಸಾದ ನಡೆಪರುಷ,
ನಿಮ್ಮ ಪ್ರಾಣಲಿಂಗದ ಕಳೆ ಜ್ಞಾನಾಚಾರ ಸಿದ್ಧಪ್ರಸಾದ ನುಡಿಪರುಷ,
ನಿಮ್ಮ ಭಾವಲಿಂಗದಕಳೆ ಭಾವಾಚಾರ ಪ್ರಸಿದ್ಧಪ್ರಸಾದ ನೋಟಪರುಷ
ನಿಮ್ಮಣುಲಿಂಗದಕಳೆ ಧರ್ಮಾಚಾರ ಪ್ರಸನ್ನಪ್ರಸಾದ ಹಸ್ತಪರುಷ,
ನಿಮ್ಮ ಪರಮಾಣುಲಿಂಗದಕಳೆ ಸರ್ವಾಚಾರ
ಚಿತ್ಪ್ರಭಾಪ್ರಸಾದ ಭಾವಪರುಷ,
ನಿಮ್ಮ ಚಿದ್ಘನಮಹಾನಿರವಯಲಿಂಗದ ಕಳೆ
ಪರಿಪೂರ್ಣಾಚಾರ ಪರಿಪೂರ್ಣಪ್ರಸಾದದ ಸರ್ವಾಂಗಪರುಷವಿತ್ತು
ಪರಮಪವಿತ್ರಪ್ರಸಾದವೆನಿಸಿ,
ನೀವರ್ಪಿಸಿದ ನಿಜಶೇಷಪ್ರಸಾದವ ಮಾಡಿ ನಿತ್ಯಮುಕ್ತರೆನಿಸಿರಯ್ಯಾ
ಪ್ರಮಥಗಣವೆ ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮವೆಂದು,
ಪರಿಪೂರ್ಣಭಕ್ತಿಯಿಂದ ಕಿನ್ನರಯ್ಯಗಳೆ ಮೊದಲು
ಇಳೆಹಾಳ ಬ್ರಹ್ಮಯ್ಯಗಳು ಕಡೆಯಾದ
ಮುನ್ನೂರರವತ್ತು ಕಡೆಯಾದ
ಮುನ್ನೂರರವತ್ತು ಗಣಾರಾಧ್ಯರು,
ಕಲಕೇತ ಮೊದಲಾದ ನಿಜವೀರಶೈವ ಸದ್ಧರ್ಮಿಗಳಿಗೆ ಅಭಿವಂದಿಸಿ
ಘನಮನಸಾಕ್ಷಿಯಾಗಿ ಹಸ್ತಾಂಜಲಿತದೊಳ್ ನಿಂದಿರ್ಪರು ಕಾಣಾ
ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
Art
Manuscript
Music
Courtesy:
Transliteration
Ā kalakētayyagaḷu guptapātakasūtakada
anācāradabhrajayāmārutanāgi khaṇḍrisi nuḍida
nirūpaṇavemba mōḍavanōḍisi pavitrarenisuva
nimityārtha modalāda arebhaktarella
ondoḍalāgi śaraṇuhokku,
hastān̄jalitadoḷ nindu, dr̥ḍhabhaktiyinda haduḷigarāgi,
mr̥dutara kiṅkaranuḍigaḷinda nuḍida pratyuttara:
Harahara hinde tappi nim'ma ghanācāra sanmārgava biṭṭu,
paramapātaka sūtakavācarisidakke eḍavibiddu,
pramathagaṇājñegaḷoḷagāgi, bhavasamudrava dāṇṭi,
Innu tappidare nam'ma pramāṇave namage mr̥tyuvāgi,
sad'dharmava sēradante sākṣiyāgiruvaru.
Avarārendoḍe:
Bhaktisthalakke kāraṇikaru hiridaṇḍanātha,
mahēśvarasthalakke kāraṇikaru vīragaṇṭe,
prasādisthalakke kāraṇikaru maruḷaśaṅkaratandegaḷu,
prāṇaliṅgisthalakke kāraṇikaru mugdhasaṅgappanavaru
śaraṇasthalakke kāraṇikaru cikkadaṇḍanātha,
aikyasthalakke kāraṇikaru ajagaṇṇatandegaḷu,
niravayasthalakke kāraṇikaru guhēśvara allamaprabhusākṣiyāgi,
nim'ma sarvācārasampadasthalakke salladante
Bhavajīvigaḷāgi hōguvudakke
nam'ma mūla cittuvinalludayavāda
cidbhrahmamūrti paraśivaliṅgamantradiravu
tolaguvude pramāṇu.
Idakke sandusanśayavillavu.
Adēnukāraṇavendoḍe:
Hinde māḍidantha pramathagaṇa binnapada kakkayyagaḷa
nijamōkṣada paramāmr̥taprasāda
jēḍara dāsayyagaḷa mahadaruvina
ācāraparidhiyāda pāvuḍada sākṣi.
Śivaleṅkaman̄caṇṇagaḷa japamāleyanoḷakoṇḍarivina śivadāra
ghaṭṭivāḷappana citprabhāpun̄jaran̄jitamāda
śrīmadghanabhasitave sākṣi kāṇā
tandegaḷirāyendu śaraṇuhokku,
śrīguruliṅgajaṅgamagaṇārādhyarige
paramānandaprasāda sthalakuḷadanuvaridu
śaraṇasandōhadinda em'ma kāyārpaṇa
karaṇārpaṇa bhāvārpaṇa pariṇāmārpaṇa
paripūrṇārpaṇavemba
abhivr̥d'dhige kāraṇavemba
nīvē gati, nīvē mati, nīvē hita,
Nīvē pita, nīvē māte,
nīvemage sarvacaitan'yavayyā,
nīvemage abhimānavemba dayāntaḥkaraṇaviṭṭu
bhavāraṇyavemba paribhavabādhege hindakke tirugadante kr̥pemāḍi
nim'miṣṭaliṅgada kaḷe kriyācāra śud'dhaprasāda naḍeparuṣa,
nim'ma prāṇaliṅgada kaḷe jñānācāra sid'dhaprasāda nuḍiparuṣa,
nim'ma bhāvaliṅgadakaḷe bhāvācāra prasid'dhaprasāda nōṭaparuṣa
nim'maṇuliṅgadakaḷe dharmācāra prasannaprasāda hastaparuṣa,
nim'ma paramāṇuliṅgadakaḷe sarvācāra
citprabhāprasāda bhāvaparuṣa,
nim'ma cidghanamahāniravayaliṅgada kaḷe
Paripūrṇācāra paripūrṇaprasādada sarvāṅgaparuṣavittu
paramapavitraprasādavenisi,
nīvarpisida nijaśēṣaprasādava māḍi nityamuktarenisirayyā
pramathagaṇave nim'ma dharma nim'ma dharma nim'ma dharmavendu,
paripūrṇabhaktiyinda kinnarayyagaḷe modalu
iḷehāḷa brahmayyagaḷu kaḍeyāda
munnūraravattu kaḍeyāda
munnūraravattu gaṇārādhyaru,
kalakēta modalāda nijavīraśaiva sad'dharmigaḷige abhivandisi
ghanamanasākṣiyāgi hastān̄jalitadoḷ nindirparu kāṇā
niravayaprabhu mahānta sid'dhamallikārjunaliṅgēśvara.