Index   ವಚನ - 65    Search  
 
ಪರತತ್ವದಿರವನರಿಯದೆ, ಕಟ್ಟು ಕಟ್ಟಳೆಗೆ ಹೊರಗಾಗಿ ಬೇಡಿದ ಹಾಂಗೆ ಮುಂದುವರಿದು, ಲಿಂಗಭೋಗಿಗಳಾಗಿ, ಅರುವೆಂಬ ಗುರುಮಾರ್ಗವ ಮರೆದು, ಭೂರಿಲಿಂಗಲಾಂಛನಧಾರಕರಾಗಿ ದಂಡನಾಥನ ಪದಾರ್ಥಕ್ಕೆ ಕಾರಣಿಕರೆನಿಸಿ, ತುಂಡುಜಂಗಮ, ಮಿಂಡಜಂಗಮ, ಚೋರಜಂಗಮವೆನಿಸಿ ಶಿವಸೂತ್ರಶರೀರಿಗಳಾಗಿ ನೆರೆದಿಪ್ಪ ಜಂಗಮವನಂತರುಂಟು. ಇದರೊಳಗೆ ಪ್ರಮಥಗಣಂಗಳು ಅರಿದರಿದು ಪಾತ್ರ ಅಪಾತ್ರ ಸತ್ಪಾತ್ರವೆಂಬ ಪದಾರ್ಥ ಸುಪದಾರ್ಥ ಪ್ರಸಾದಗಳೆಂಬ ತ್ರಿವಿಧವರ್ತಕವಿಡಿದು, ಸತ್ಕ್ರಿಯಾಚಾರಭಕ್ತಿ, ಸಮ್ಯಜ್ಞಾನಾಚಾರಭಕ್ತಿ, ನಡೆನುಡಿಗಳಿಂದ ಒಬ್ಬರಿಗೊಬ್ಬರು ಭೃತ್ಯರಾಗಿ ಅನಾದಿಚಿದ್ಭ್ರಹ್ಮವೆ ಸಾಕ್ಷಿಯಾಗಿ, ಭಕ್ತಮಹೇಶಜಂಗಮಮೂರ್ತಿ ಮೊದಲಾದವರೆಲ್ಲ ಭಕ್ತಿಯೇ ಮುಕ್ತಿಗೆ ಜೀವನವೆಂದರಿದು, ಒಬ್ಬರೊಬ್ಬರು ಬಿನ್ನಪಗಳಿಂದೆ ಆಚಾರದಾಜ್ಞೆಯೆಂಬ ಪಾವುಡದ ಬೋದುವ ಕಟ್ಟಿ, ಸರ್ವಾಚಾರಸಂಪದವೆಂಬ ಬೆಳೆಯ ಬೆಳೆದು, ಅನಾಚಾರವೆಂಬ ಕಸವ ಕಡೆಗೆ ಕಿತ್ತು ಬಿಸುಟಿ, ಆಚಾರವೆ ಅಂಗ ಮನ ಪ್ರಾಣ ಭಾವ ಕರಣೇಂದ್ರಿಯಗಳಾಗಿ ಆಹ್ವಾನಿಸಿ, ಅನಾಚಾರವೆ ಮಲಮೂತ್ರವೆಂದು ವಿಸರ್ಜಿಸಿ ತಮ್ಮ ನಿಜಚಿದ್ಬೆಳಗ ತಾವರಿದು, ಮಲಮಾಯಾಭೋಗವ ಮರೆದಿಪ್ಪರು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.