Index   ವಚನ - 75    Search  
 
ಘನಗುರು ಲಿಂಗಜಂಗಮಸೂತ್ರದಿಂದ ಕ್ರಿಯಾದೀಕ್ಷೆಯಾದಲ್ಲಿ ಶುದ್ಧಪ್ರಸಾದಸಂಬಂಧ. ಮಂತ್ರದೀಕ್ಷೆಯಾದಲ್ಲಿ ಸಿದ್ಧಪ್ರಸಾದಸಂಬಂಧ. ವೇದಾದೀಕ್ಷೆಯಾದಲ್ಲಿ ಪ್ರಸಿದ್ಧಪ್ರಸಾದಸಂಬಂಧ. ಮತ್ತಂ ಕ್ರಿಯಾದೀಕ್ಷೆಯೊಳಗಿನ ಸಪ್ತವಿಧದೀಕ್ಷೆಯಲ್ಲಿ ಪ್ರಸಾದಿಯ ಪ್ರಸಾದಸಂಬಂಧ. ಮಂತ್ರದೀಕ್ಷೆಯೊಳಗಿನ ಸಪ್ತವಿಧದೀಕ್ಷೆಯಲ್ಲಿ ಪ್ರಸನ್ನಾನುಭಾವ ಪ್ರಸಾದಸಂಬಂಧ. ವೇದಾದೀಕ್ಷೆಯೊಳಗಿನ ಸಪ್ತವಿಧದೀಕ್ಷೆಯಲ್ಲಿ ಪರಿಪೂರ್ಣಪ್ರಸಾದಸಂಬಂಧ. ಇಂತಪ್ಪ ದೀಕ್ಷೊಪದೇಶದಿಂದ ತ್ರಿವಿಧ ಗುರುಲಿಂಗಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಮಂತ್ರಾಚಾರ ಕ್ರಿಯಾನುಭಾವ ಜ್ಞಾನೋಪದೇಶವರಿದಾನಂದದಿಂದ ಕೊಡಕೊಳ್ಳಬಲ್ಲಾತನೆ ಪೂಜ್ಯಸ್ವರೂಪ ಸಚ್ಚಿದಾನಂದ ಸಾಕಾರಲಿಂಗ ಶರಣನೆಂಬೆ ನೋಡಾ. ಇಂತೆಸೆವ ಲಿಂಗಶರಣನ ನಿಜನಿಲವನರಿದರ್ಚಿಸಿ ಕೊಡಕೊಳ್ಳಬಲ್ಲಾತನೆ ಪೂಜ್ಯಕಸ್ವರೂಪ ಸಚ್ಚಿದಾನಂದ ನಿಃಕಳಂಕ ನಿಃಶೂನ್ಯನಿರಂಜನ ನಿರವಯಪ್ರಭು ನಿರಾಕಾರ ಶರಣಲಿಂಗನೆಂಬೆ ನೋಡಾ ಇಂತೆಸೆವ ಸಾಕಾರಲಿಂಗ ಶರಣನಾಚರಣೆಸಂಬಂಧ ನಿರಾಕಾರ ಶರಣಲಿಂಗಸಂಬಂಧದಾಚರಣೆಯ ನಿಲವ ತಿಳಿಯದೆ, ನಾನು ಷಟ್ಸ್ಥಲೋಪದೇಶಿ, ನೀನು ಷಟ್ಸ್ಥಲೋಪದೇಶಿಗಳೆಂದು ಒಪ್ಪವಿಟ್ಟು ನುಡಿವ ನುಡಿಜಾಣರ ಕಂಡು ಎನ್ನ ತನು ಮನ ಭಾವದ ಕೊನೆಮೊನೆಯಲ್ಲಿ ಬೆಳಗುವ ನಿಜಘನಜ್ಯೋತಿ ನಾಚಿ ಬಯಲಾಯಿತ್ತು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.