Index   ವಚನ - 80    Search  
 
ಅನಾದಿಪ್ರಮಥಗಣನಾಯಕ ಪರಮಾರಾಧ್ಯ ಶ್ರೀಗುರುಕರಜಾತ ಏಕವಿಂಶೋಪದೇಶ ಷಟ್ಪ್ರಸಾದ ಪಾದೋದಕ ಮಂತ್ರಸ್ವರೂಪ ಷಟ್ಸ್ಥಲಸಂಬಂಧವಾದ ಭಕ್ತ ಮಹೇಶ ಗಣಾರಾಧ್ಯರಿಗೆ ಯೋಗ್ಯವುಳ್ಳ ತ್ರಿವಿಧಾಚಾರಸಂಬಂಧವೆ ಪ್ರಾಣವಾದ ಸೂತ್ರವದಕ್ಕೆ ಹರನಿರೂಪಣ ಸಾಕ್ಷಿ: `ಸತ್ಯಾಚಾರಂ ನಿತ್ಯಾಚಾರಂ ಧರ್ಮಾಚಾರಂ ವರಾನನೆ' ಎಂದುದಾಗಿ, ಜಾಗ್ರಾವಸ್ಥೆಯ ವಿಶ್ವಪ್ರಪಂಚಿನ ಶಿವಾತ್ಮನ ಪಾಶಬದ್ಧನಡೆನುಡಿಗಳ ಹೊದ್ದಲೀಯದೆ, ಕೇವಲ ಗುರುವಾಕ್ಯಪ್ರಮಾಣವಾಗಿ, ಪೂರ್ವಪುರಾತನೋಕ್ತಿ ವಚನಸಾರಾಮೃತವಿಡಿದು, ಇಷ್ಟಲಿಂಗದೊಳಗಣ ನವಲಿಂಗಮಂ ಭೇದಿಸಿ, ಸತ್ಕ್ರಿಯಾಜಪೋಪದೇಶ ಸಮ್ಯಜ್ಞಾನಜಪೋಪದೇಶ ಮಹಾಜ್ಞಾನಜಪೋಪದೇಶ ಪರಿಪೂರ್ಣಜ್ಞಾನಜಪೋದೇಶದ ಮಹಾಬೆಳಗನರಿದು, ಫಲಪದದಾಯುಷ್ಯದ ಭೋಗಯೋಗಮಂ ನೆರೆ ನೀಗಿ, ಸತ್ಕ್ರಿಯೆ ಘನಗುರುಲಿಂಗಜಂಗಮದ ಕೃಪಾನಂದದ ನಿರಾಸೆ ನಿರ್ಲಜ್ಜ ನಿರ್ವಿಷಯ ನಿರ್ಮೋಹ ನಿರಾಪೇಕ್ಷ ನಿರ್ದೇಶ ನಿರಾಶ್ರಯ ನಿರವಯಬ್ರಹ್ಮದ ನಿರಾವರಣನಾಗಿ ತನ್ನ ತಾನರ್ಚಿಸಿ ಕೊಡುವಲ್ಲಿ ಕೊಂಬಲ್ಲಿ ನುಡಿವಲ್ಲಿ ನಡೆವಲ್ಲಿ ಕೈ ಎರಡಾಗದೆ, ನುಡಿ ಎರಡಾಗದೆ, ಪಾದವಚನಾನಂದದಿಂದ ಶೀಲವ್ರತಾಚಾರ ನಿತ್ಯನೇಮಂಗಳಲ್ಲಿ ಅಭಿನ್ನಸ್ವರೂಪರಾಗಿ, ಯಥಾರ್ಥದಿಂದ ಇಹಪರಲೋಕದ ಭೋಗಮೋಕ್ಷಾಪೇಕ್ಷ ಹೊದ್ದದಿರ್ಪುದೆ ಮಾರ್ಗಾಚರಣೆಯ ಸತ್ಯದಾಚಾರದಿರವಿನ ಇಷ್ಟಲಿಂಗ ತಾನೆ ನೋಡಿರಣ್ಣಗಳಿರಾ. ಅಲ್ಲಿಂದ ಸ್ವಪ್ನಾವಸ್ಥೆಯ ತೈಜಸನ ಪ್ರಪಂಚಿನ ಅಂತರಾತ್ಮನ ಪಾಶಬದ್ಧ ನಡೆನುಡಿಗಳಂ ಹೊದ್ದಲೀಯದೆ, ಕೇವಲ ಘನಲಿಂಗವಾಕ್ಯ ಪ್ರಮಾಣವಾಗಿ ಪೂರ್ವಪುರಾತನೋಕ್ತಿವಚನ ಸಾರಾಮೃತವಿಡಿದು, ಪ್ರಾಣಲಿಂಗದೊಳಗಣ ನವಲಿಂಗಮಂ ಭೇದಿಸಿ, ಮಹಾಮಂತ್ರದ ಚಿದ್ಬೆಳಗನರಿದು, ಮಹಾಬೆಳಗಾಗಿ ಸುಳಿಗಾಳಿಯಂತೆ ಲಿಂಗಪ್ರದಕ್ಷಿಣದಿಂದ ಸುಳಿದಾಡಿ, ಪ್ರದಕ್ಷಿಣಮಂ ಮಾಡುತ್ತ ಹರಗಣ ಸಮ್ಮೇಳಮಂ ಕೂಡಿಕೊಂಡಾಡುತ್ತಂ, ಭವರೋಗವೈದ್ಯರಾಗಿರ್ಪುದೆ ನಿತ್ಯಾಚಾರದಿರವಿನ ಪ್ರಾಣಲಿಂಗಸಂಧಾನದ ಮೀರಿದಾಚರಣೆಯ ಚಿದ್ಭ್ರಹ್ಮಮೂರ್ತಿ ಮಹಾಘನ ಪ್ರಾಣಲಿಂಗ ತಾನೆ ನೋಡಿರಣ್ಣಗಳಿರಾ. ಅಲ್ಲಿಂದಂ ಸುಷುಪ್ತ ತೂರ್ಯ ತೂರ್ಯಾತೀತ ನಿರವಯನೆಂಬ ಪ್ರಜ್ಞಾಪರಿಪೂರ್ಣ ಪರಾತ್ಪರ ನಿರಾತಂಕನ ಪ್ರಪಂಚಿನ ಪರಮಾತ್ಮ ನಿರ್ಮಲಾತ್ಮ ಶುದ್ಧಾತ್ಮ ಆನಂದಾತ್ಮನ ನಟನಾಟಕ ಕಪಟವೇಷಮಂ ಹೊದ್ದಲೀಯದೆ, ಕೇವಲ ಪರಿಪೂರ್ಣಾನಂದ ಜ್ಯೋತಿರ್ಮಯನಚಲಾನಂದ ನಿಃಶಬ್ದ ಚಿದ್ಬ್ರಹ್ಮಮಂ ಕೂಡಿ, ಭಿನ್ನಭಾವವಿಲ್ಲದೆ, ತಾನೇ ತಾನಾಗಿ, ಸಕಲ ನಿರಾಕಾರ ಜಾಗ್ರ ಸ್ವಪ್ನ ತನುಮನದ ಅಭೀಷ್ಟಾದಿಗಳಿಗೆ ಚೈತನ್ಯ ತಾನಾಗಿ, ತನಗೊಂದು ಸುಖ-ದುಃಖ, ಪುಣ್ಯ-ಪಾಪ, ಸ್ತುತಿ-ನಿಂದ್ಯಾದಿಗಳ ಹೊದ್ದಿಗೆಯಿಲ್ಲದೆ, ಬೆಳಗಿಂಗೆ ಮಹಾಬೆಳಗಾಗಿ, ಬಯಲೊಳಗೆ ಮಹಾಬಯಲಾಗಿರ್ಪುದೆ ಭಾವಲಿಂಗಸಂಧಾನದ ಪರಿಪೂರ್ಣಾಚರಣೆಯ ಸದ್ಧರ್ಮದಾಚಾರದಿರವು ಕಾಣಿರಣ್ಣಗಳಿರಾ. ಇಂತೆಸೆವ ಜಾಗ್ರಾವಸ್ಥೆಯೆ ಸಾಕಾರವಾದ ಇಷ್ಟಲಿಂಗವಾಗಿ, ಸ್ವಪ್ನಾಪ್ತಾವಸ್ಥೆಯ ನಿರವಯವಾದ ಭಾವಲಿಂಗವಾಗಿ ಈ ತ್ರಿವಿಧಲಿಂಗಸ್ವರೂಪನೆ ಶರಣ ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.