Index   ವಚನ - 90    Search  
 
ಮನತ್ರಯಮಂಡಲಂಗಳಲ್ಲಿ ನಿಃಕಲವ್ಯಾಪಾರದೊಡನೆ ಕೂಡಿ ವರ್ತಿಸುವಂಥ, ಸ್ವಪ್ನ ನಿಜವಿಶ್ವಾಸವೆಂಬ ಹೃತ್ಪೀಠಮಧ್ಯದಲ್ಲಿ ಮೂರ್ತಿಗೊಂಡಿರುವ ನಿಶ್ಶೂನ್ಯಬ್ರಹ್ಮಪ್ರಾಣಲಿಂಗದೇವನ, ನಿಶ್ಶೂನ್ಯಹಸ್ತದಲ್ಲಿ ಮೂರ್ತಿಗೊಳಿಸಿ, ನಿರಾಕಾರವಾದಷ್ಟವಿಧಾರ್ಚನೆ, ಷೋಡಶೋಪಚಾರದಿಂದರ್ಚಿಸಿ, ಎರಡಳಿದು, ತಾನೇ ತಾನಾಗಿ, ಘನಮಿಶ್ರಾನಂದಭೋಗದಿಂದ ಅಚಲಾನಂದನಾಗಿ, ಅಲ್ಲಿಂದ ಆ ಜಾಗ್ರದ ನೆನಹನೆಲ್ಲ ಕಂಡು ಪರಿಪೂರ್ಣತೃಪ್ತನಾಗಿ, ಅದೇ ಪ್ರಣಮಲಿಂಗಮೂರ್ತಿಗಳ ಷಟ್ಚಕ್ರಂಗಳಲ್ಲಿ ಸಂಬಂಧವಿಟ್ಟು, ಅರುಣೋದಯವೆ ಮೊದಲು ಅದಾವುದೆಂದೊಡೆ: ತನ್ನ ಘನಮನದ ಬೆಳಗೆ ಅರುಣೋದಯವೆನಿಸುವುದು. ಆ ಬೆಳಗಿನಲ್ಲಿ ದೃಢಚಿತ್ತವಾಗಿ, ಪ್ರಥಮಾಲಯ ಚತುಃಕೋಣೆಯ ಚೌದಳಮಂಟಪದಲ್ಲಿ ಮೂರ್ತಿಗೊಂಡಿರುವ, ಚತುಸ್ಸಾರಾಯಸ್ವರೂಪದಿಂದ ಧಾತುಗಳಿಗೆ ದಾತಾರನಾದ ಆಚಾರಲಿಂಗಮಂ ಪರಿಪೂರ್ಣದ್ರವ್ಯಗಳಿಂದರ್ಚಿಸಿ, ಘನಕ್ಷರನ್ಯಾಯದಂತೆ, ಎಡಬಲಪ್ರದಕ್ಷಿಣದಿಂದ ನಮೋ ನಮೋ ಮತ್ಪ್ರಾಣಕಾಂತರೆ ಭವರುಜೆಗಾದಿವೈದ್ಯ ಶ್ರೀಗುರುಬಸವದಂಡನಾಥ ಚಿತ್ಪ್ರಭಾಪುಂಜದ ಮಹಾಬೆಳಗೆ, ನಿಮ್ಮೊಳಗಿಂಬಿಟ್ಟುಕೊಳ್ಳಿರಯ್ಯಾಯೆಂದು ಶ್ರದ್ಧಾತುರದಿಂದ ಹಾಂಗೆ ದಳಪ್ರಣಮಲಿಂಗಮಂ ಧ್ಯಾನಿಸುತ್ತ, ಷಟ್ಕೋಣೆ ಸಹಸ್ರಕೋಣೆ ತ್ರಿಕೋಣೆಯೆಂಬಷ್ಟಕುಲ ಗಿರಿಪರ್ವತಗಳೇರಿ, ಹಿಂದಮುಂದಣ ಕಾಲಕಾಮಕರ್ಮಸಂಸಾರದಟ್ಟುಳಿಯ ನೀಗಿ, ನಾದ ಬಿಂದು ಕಳೆಗಳಂ ಮರೆದು, ಚಿನ್ನಾದ ಚಿದ್ಬಿಂದು ಚಿತ್ಕಳೆಗಳಂ ಅರಿದು ಪರನಾದ ಬಿಂದುವಂ ಕೂಡಿ, ಧ್ಯಾನವಮಾಡಿದ ಮಂತ್ರಲಿಂಗಜಪವೆಷ್ಟಾಯಿತೆಂದೊಡೆ, ಒಂದು ದಿನಕ್ಕೆ ದಿನರಾತ್ರಿಗಳೆರಡು, ತಾಸು ಇಪ್ಪತ್ತುನಾಲ್ಕು, ಗಳಿಗೆ ಅರವತ್ತು, ದಳ ಐವತ್ತು, ಪ್ರದಕ್ಷಿಣ ಇಪ್ಪತ್ತೊಂದು ಸಾವಿರದಾರುನೂರು ಜಪವೆನಿಸಿ, ಮನಮಂತ್ರಸ್ವರೂಪವಾಗಿ ಘನವನೊಡಗೂಡಿದಂಥದೆ ನಿರ್ಗುಣಾನಂದದ ನಿರಾಕಾರ ಜಪವೆನಿಸುವುದು, ಇದೇ ಶರಣಸನ್ಮಾರ್ಗದ ಪರಮಪಂಚಾಕ್ಷರದಿರವೆನಿಸುವುದು. ಇದೇ ನಿಜಜಂಗಮಭಕ್ತಗಣಾರಾಧ್ಯರ ಇರವು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.