Index   ವಚನ - 96    Search  
 
ಅನಾದಿಮೂಲಚಿತ್ತುವಿನ ಚಿದಂಶಿಕನಾದ ಶಿವಯೋಗಸಂಪೂಜ್ಯರಾದವರು, ತಮ್ಮ ತನುಮನಪ್ರಾಣೇಂದ್ರಿ ಕರಣಕರ್ಕಶವಿಷಯವ್ಯಾಪಾರ ಭವಘೋರಸಂಸಾರವೆ ತನ್ನ ತಾನಾಗುವದಕ್ಕೆ ಕಾಲಕಾಮ ಮಾಯಾಪಾಶದ ತೊಡಕೆಂದರಿದು ನಿರಸನಂ ಮಾಡಿ, ನರಜೀವಸೂತಕಪಾತಕ ರಿಣಭಾರಕರಡಿಮೆಟ್ಟಿ, ನಡೆನುಡಿ ಒಡಲಗುಣವಳಿದುಳಿದು, ದೃಢನೈಷ್ಠಾನುಭಾವರ ಸಂಗಸಮರತಿಯಂ ಸಾಧಿಸಿ ಭೇದಿಸುತ್ತ ಷಟ್ಸ್ಥಲೋಪದೇಶ ಕರತಳಾಮಳಕವಾಗಿ, ಘನಲಿಂಗ ಮೆಚ್ಚಿ ನಡೆದು, ಘನಲಿಂಗ ಮೆಚ್ಚಿ ನುಡಿದು ಘನಲಿಂಗ ಮೆಚ್ಚಿ ಒಡಲೊಂದಾಗಿ ಭೋಗಿಸಿ, ಅಚ್ಚಪ್ರಸಾದಿ ನಿಚ್ಚಪ್ರಸಾದಿ ಚಿತ್ಕಳಾಪ್ರಸಾದಿಗಳಿಗೆ ಕಿಂಕುರ್ವಾಣಭೃತ್ಯಭಕ್ತಿ ನಿರ್ವಂಚನತೆಯಳವಟ್ಟು ಭಾವಭರಿತವಾಗಿ. ಈ ಲೀಲಾಸಮಯದೊರಕದೆಂದು, ಪರಿಪೂರ್ಣಜ್ಞಾನಾನುಭಾವವ ಸಾಧಿಸುತ್ತ, ಸರ್ವಾಚಾರಸಂಪದಮಂ ಗ್ರಹಿಸಿ, ಸಗುಣಾರ್ಚನಾರ್ಪಣ ನಿರ್ಗುಣಾರ್ಚನಾರ್ಪಣಮಂ ನೆರೆಯರಿದು, ಚಿತ್ಕಲಾಪ್ರಸನ್ನಪ್ರಸಾದಿ ಬಳಸಿಬ್ರಹ್ಮ ಬಾಲಬ್ರಹ್ಮದ ವಿರಾಗತಿಯನರಿದಾಚಾರಮೂರ್ತಿ ನಿಜಜಂಗಮಲಿಂಗದೇವನು, ತನ್ನ ದಯಾನಂದದಿಂದ ತೆರಹಿಲ್ಲದೆ ದಿನರಾತ್ರಿಗಳಲ್ಲಿ ಒದಗಿಬಂದೊಡೆ, ಮಹಾಸಂತೋಷ ಪ್ರೀತಿ ಪ್ರೇಮಾನಂದದಿಂದ, ಅಚ್ಚಪ್ರಸಾದಿಯಾಚರಣೆಯಂತೆ ಹರುಕಾಗದೆ ಶೋಧಕತ್ವದಿಂದ ಸದ್ರೂಪು ರುಚಿ ತೃಪ್ತಿದ್ರವ್ಯಮಂ ಕಠಿಣಗಳ ಕಳೆದುಳಿದು ಮೌನಮಂತ್ರದಿಂದ ಪರಿಪೂರ್ಣಲಿಂಗಾರ್ಪಣದ ವರ್ಮವರಿದು, ಪರಿಣಾಮತಟ್ಟುವಂತೆ ಮಿಶ್ರಾರ್ಪಣಮಂ ಬೆಸಗೊಂಡು, ಮತ್ತವರ ತೆರಹಿಲ್ಲದೆ ಚರಣಕಮಲಮಂ ದರುಶನ ಸ್ಪರಿಶನ ಸಂಭಾಷಣೆ ತೀರ್ಥಪ್ರಸಾದಾನುಭಾವಂಗಳಿಂದ ಸೂತ್ರದೊಳು ಲೋಲುಪ್ತನಾಗುತ್ತ ತನುಮನಕರಣೇಂದ್ರಿಯಗಳಲ್ಲಿ ಅಚ್ಚಪ್ರಸಾದಿಸ್ಥಲವಾಗಿ, ನಿಜನೈಷ್ಠಾನುಭಾವ ಹೊದ್ದಲ್ಲದೆ ಅಲ್ಲಿಂದ ಜಂಗಮಲಿಂಗದೇವನು ದಿನದಲ್ಲಿ ಒದಗಿ, ರಾತ್ರಿಯಲ್ಲಿ ಒದಗದಿದ್ದರೆ ನಿಚ್ಚಪ್ರಸಾದಿಯಂತೆ ಸಂಬಂಧದಾಚರಣೆಯನಾಚರಿಸಿ, ಸತ್ತುಚಿತ್ತಾನಂದ ನಿತ್ಯಪರಿಪೂರ್ಣವಾಗಿ ಅಲ್ಲಿಂದ ಶರಣಸತಿ ಲಿಂಗಪತಿಯೆಂಬ ರತಿಕೂಟದಿಂದ, ಕ್ರಿಯಾಘನಗುರುಲಿಂಗಜಂಗಮಸೂತ್ರವಿಡಿದು, ಬಂದ ಕ್ರಿಯಾಭಸಿತ ಪ್ರಣಮಪ್ರಕಾಶಂಗಳಂ ಕಣ್ಮನ ಭಾವ ತುಂಬಿ ತುಳುಕಾಡುತ್ತ, ದಿನರಾತ್ರಿಗಳೆಂಬ ಸಂದುಸಂಶಯವಳಿದು, ಕರ ಮನ ಭಾವದ ಕೊನೆಮೊನೆಯೊಳಗೆ ಬೆಳಗುವ ಮಹಾಜ್ಯೋತಿಯೊಡಗೂಡಿ, ಸಂಬಂಧದಾಚರಣೆಯನಗಲದೆ, ಪರಿಪೂರ್ಣ ಮಹಾಘನ ಶೇಷ ಪಾದೋದಕ ಪ್ರಸನ್ನಪ್ರಸಾದಪ್ರಣಮಕೂಟಂಗಳಿಂದೆ ಕ್ರಿಯಾಲೀಲೆಯ ಸಮಾಪ್ತಮಾಡಬಲ್ಲಾತನೆ, ಜ್ಯೋತಿ ಜ್ಯೋತಿ ಕೂಡಿ ಬಯಲ ಸೇರಿದಂತೆ, ಶರಣನ ಲಿಂಗಸಂಗಸಮರಸೈಕ್ಯ ಸಮಯಪ್ರಸಾದಿಯ ಸ್ಥಲದಿರವು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.