Index   ವಚನ - 64    Search  
 
ಸಕಲ ಸ್ಥಾವರ ಚರ ಘಟಪಟಾದಿಗಳೆಲ್ಲವು ಪೃಥ್ವಿಯಿಂದವೆ ಜನನ, ಪೃಥ್ವಿಯ ಉತ್ಕೃಷ್ಟದಿಂದವೆ ಮರಣವೆಂಬುದನರಿತಲ್ಲಿ, ಕರ್ಮಕ್ರೀ ವರ್ಮವ ಬಲ್ಲವ. ಸರ್ವಚೇತನ ಭೌತಿಕಕ್ಕೆಲ್ಲಕ್ಕೂ ಅಪ್ಪುವಿನಿಂದವೆ ಉತ್ಪತ್ಯ, ಅಪ್ಪುವಿನ ಉತ್ಕೃಷ್ಟದಿಂದವೆ ನಷ್ಟವೆಂಬುದನರಿತಲ್ಲಿ, ಜೀವನದ ಆಗುಚೇಗೆಯ ಬಲ್ಲವ. ಸರ್ವದೀಪ್ತಿ ಪ್ರಕಾಶ ತೇಜಸ್ಸು ಅಗ್ನಿಯಿಂದವೆ ಉತ್ಪತ್ಯ, ಅಗ್ನಿಯ ಉತ್ಕೃಷ್ಟದಿಂದವೆ ನಷ್ಟವೆಂಬುದನರಿತಲ್ಲಿ, ಪರಮಪ್ರಕಾಶ ಬಲ್ಲವ. ಸರ್ವಗೃಹೀತವಾಗಿ ಸುಳಿವ ಮಾರುತ ಘೋಷ ವಾಯುವಿನಿಂದವೆ ಉತ್ಪತ್ಯ, ವಾಯುವಿನ ಉತ್ಕೃಷ್ಟದಿಂದವೆ ಲಯವೆಂಬುದನರಿದಲ್ಲಿ ದಿವ್ಯಜ್ಞಾನ ಬಲ್ಲವ. ಆಕಾಶ ಮಹದಾಕಾಶದಿಂದವೆ ಉತ್ಪತ್ಯ, ಮಹದಾಕಾಶ ಮಹದೊಡಗೂಡಿದಲ್ಲಿ ಪಂಚಭೌತಿಕ ನಷ್ಟವೆಂಬುದನರಿದು, ಈ ಪಂಚಭೌತಿಕದ ತನು, ಸಂಚಿತ ಪ್ರಾರಬ್ಧ ಆಗಾಮಿಗಳ ಕಂಡು, ಸಂಚಿತವೆ ಉತ್ಪತ್ಯ, ಪ್ರಾರಬ್ಧವೆ ಸ್ಥಿತಿ, ಆಗಾಮಿಯೆ ಲಯವೆಂಬುದ ತಿಳಿದು, ಇಂತಿವರೊಳಗಾದ ಸಂಚದಲ್ಲಿ ಸಂಬಂಧಿಸಿಪ್ಪ ಸರ್ವೇಂದ್ರಿಯದ ಗೊಂಚಲು ಮುರಿದು ನಿಂದ ಸ್ವಯಾನುಭಾವಿಗೆ ಕಾಯಕ್ಕೆ ಕರ್ಮವೆಂಬುದಿಲ್ಲ, ಜ್ಞಾನಕ್ಕೆ ಇದಿರೆಡೆಯೆಂಬ ಕೂಟದ ಭಾವ ನಷ್ಟ. ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನನು.