Index   ವಚನ - 67    Search  
 
ಅಷ್ಟತನುಮೂರ್ತಿ ಕೂಡಿ ನಿಂದು, ವಸ್ತುವನರಿಯಬೇಕೆಂ[ಬು]ದು, ತತ್ವ ಇಪ್ಪತ್ತೈದು ಕೂಡಿ ನಿಂದು, ವಸ್ತುವನರಿಯಬೇಕೆಂಬುದು, ಶತ ಏಕವನರಸಿ ಒಂದುಗೂಡಿ ವಸ್ತುವನರಿಯಬೇಕೆಂಬುದು, ತಾಪತ್ರಯವಾರು, ತನುತ್ರಯ ಮೂರು, ದಶವಾಯುವಿನಲ್ಲಿ ಸೂಸುವ ಆತ್ಮನ ಮುಕ್ತವ ಮಾಡಿ ವಸ್ತುವನರಿಯಬೇಕೆಂಬುದು, ಅಷ್ಟಮದಂಗಳ ಹಿಟ್ಟುಗುಟ್ಟಿ, ವಸ್ತುವ ಕಾಣಬೇಕೆಂಬುದು, ಷಟ್ಸ್ಥಲವನಾಚರಿಸಿ ನಿಂದು ವಸ್ತುವ ಒಡಗೂಡಿ ಅರಿಯಬೇಕೆಂಬುದು, ಬ್ರಹ್ಮನ ಉತ್ಪತ್ಯಕ್ಕೆ ಹುಟ್ಟದೆ, ವಿಷ್ಣುವಿನ ಸ್ಥಿತಿಗೊಳಗಾಗದೆ, ರುದ್ರನ ಲಯಕ್ಕೆ ಸಿಕ್ಕದೆ, ನಿಜದಲ್ಲಿ ನಿಂದು ವಸ್ತುವನರಿಯಬೇಕೆಂಬುದು ಅದೇನು ಹೇಳಾ? ಆ ಗುಣ ಸ್ವಾದೋದಕ ಮೇಘದಲ್ಲಿ ಏರಿ ಧರೆಗೆಯ್ದಿದಂತೆ, ಆ ಅಪ್ಪುವಿನಿಂದ ತರು, ಸಸಿ ಸಕಲಜೀವಂಗಳಿಗೆ ಸುಖವನೆಯ್ದಿಸುವಂತೆ, ಎಂಬುದನರಿದು ವರ್ತನಕ್ಕೆ ಕ್ರೀ, ಕ್ರೀಗೆ ನಾನಾ ಭೇದ, ನಾನಾ ಭೇದಕ್ಕೆ ವಿಶ್ವಮಯ ಸ್ಥಲಂಗಳಾಗಿ, ಸ್ಥಲ ಏಕೀಕರಿಸಿ ನಿಂದುದು ಮಹಾಜ್ಞಾನ. ಆ ಮಹಾಜ್ಞಾನವನೇಕೀಕರಿಸಿ ನಿಂದುದು ದಿವ್ಯಜ್ಞಾನ. ಆ ಜ್ಞಾನ ಸುಳುಹುದೋರದೆ ನಿಂದುದು ಪ್ರಾಣಲಿಂಗಿಯ ಭಾವ. ಆ ಭಾವ ನಿರ್ಭಾವವಾದುದು ಐಕ್ಯಾನುಭಾವ. ನಿಃಕಳಂಕ ಮಲ್ಲಿಕಾರ್ಜುನಲಿಂಗದಲ್ಲಿ ಸಂದನಳಿದು ನಿಂದ ನಿಜ.