Index   ವಚನ - 137    Search  
 
ಉದಕವಿಲ್ಲದಿರೆ ಅಂಬುಧಿ ತಟಾಕಂಗಳೆಂಬ ನಾಮವುಂಟೆ ? ಬಣ್ಣ ನಾಸ್ತಿಯಾಗಿರೆ ಬಂಗಾರವೆಂಬ ವಿಶೇಷವುಂಟೆ ? ಗಂಧವಿಲ್ಲದಿರೆ ಚಂದನವೆಂಬ ಅಂಗವುಂಟೆ ? ನೀನಿಲ್ಲದಿರೆ ನಾನೆಂಬ ಭಾವವುಂಟೆ ? ಜಗವೆಲ್ಲ ನಿನ್ನ ಹಾಹೆ, ಉತ್ಪತ್ಯ ಸ್ಥಿತಿ ಲಯವೆಲ್ಲ ನಿನ್ನ ಹಾಯೆ. ಕ್ರೀ, ನಿಃಕ್ರೀಯೆಂಬುದೆಲ್ಲ ನಿನ್ನ ಹಾಹೆ. ಜಗಹಿತಾರ್ಥವಾಗಿ ಭಕ್ತನಾದೆ. ಭಕ್ತಿ ತದರ್ಥವಾಗಿ ಮಾಹೇಶ್ವರನಾದೆ. ಮಾಹೇಶ್ವರ ತದರ್ಥವಾಗಿ ಪ್ರಸಾದಿಯಾದೆ. ಪ್ರಸಾದಿ ತದರ್ಥವಾಗಿ ಪ್ರಾಣಲಿಂಗಿಯಾದೆ. ಪ್ರಾಣಲಿಂಗಿ ತದರ್ಥನಾಗಿ ಶರಣನಾದೆ. ಶರಣ ತದರ್ಥವಾಗಿ ಐಕ್ಯನಾದೆ. ಇಂತೀ ಷಡುಸ್ಥಲಮೂರ್ತಿಯಾಗಿ ಬಂದೆಯಲ್ಲಾ ಸಂಗನಬಸವಣ್ಣ, ಚೆನ್ನಬಸವಣ್ಣ, ನಿಮ್ಮ ಸುಖದುಃಖದ ಪ್ರಮಥರು ಸಹಿತಾಗಿ ಏಳುನೂರೆಪ್ಪತ್ತು ಅಮರಗಣಂಗಳು, ಗಂಗೆವಾಳುಕ ಸಮಾರುದ್ರರು ಮತ್ತೆ ಅವಧಿಗೊಳಗಲ್ಲದ ಸಕಲಪ್ರಮಥರು ಬಂದರಲ್ಲಾ. ಬಂದುದು ಕಂಡು ಎನ್ನ ಸಿರಿ ಉರಿಯೊಳಗಾಯಿತ್ತು. ಎನ್ನ [ಭ]ವದ ಉರಿಯ ಬಿಡಿಸು, [ಭ]ವವಿರಹಿತ ನಿಃಕಳಂಕ ಮಲ್ಲಿಕಾರ್ಜುನಾ.