ಊರೊಳಗಣ ಉಡು ಕೇರಿಯ ನುಂಗಿತ್ತು.
ಜಾಗಟದೊಳಗಣ ಧ್ವನಿ ಆ ಜಾಗಟವ ನುಂಗಿತ್ತು.
ಸಾರಬಂದ ಧೀರನ ಬಾರಿಕ ಕೊಂದ.
ನಾಡು ಹಾಳಾಯಿತ್ತು, ಪಟ್ಟಣ ಸೂರೆಹೋಯಿತ್ತು.
ಕಟ್ಟರಸು ಸಿಕ್ಕಿದ, ಪ್ರಧಾನ ತಪ್ಪಿದ.
ಎಕ್ಕಟಿಗನ ಮಕ್ಕಳು ಕೆಟ್ಟೋಡಿದರು.
ತಪ್ಪಿದ ಪ್ರಧಾನ ಒಪ್ಪವಿಟ್ಟ ರಾಜ್ಯವ,
ಸಿಕ್ಕಿದರಸ ಬಿಡಿಸಿ, ಎಕ್ಕಟಿಗನ ಮಕ್ಕಳ ಸಂತೈಸಿ,
ಹಿರಿಯರಸನ ಕೈಸೆರೆಯ ಬಿಡಿಸಿ,
ತಾ ಕೈಯೊಳಗಾಗಿ ಕೆಟ್ಟ ಪ್ರಧಾನಿ, ಸಿಕ್ಕದೆ ಕೆಟ್ಟ ಅರಸು.
ಇವರೆಲ್ಲರು ಕೆಟ್ಟ ಕೇಡ ನೋಡಿ ತಪ್ಪಿದೆನಯ್ಯಾ.
ಈ ಮಾಟಕೂಟದ ಹೋರಟೆಗಂಜಿ ಬಿರಿದ ಬಿಟ್ಟ ಮೇಲೆ,
ಅಲಗಿನ ಹಂಗೇಕೆ ?
ನಾಡಬಿಟ್ಟು ತೊಲಗಿದವಂಗೆ, ಒಂದೂರ ಸುದ್ದಿಯೇಕೆ,
ನಿಃಕಳಂಕ ಮಲ್ಲಿಕಾರ್ಜುನಾ.