Index   ವಚನ - 178    Search  
 
ಒಂದು ಪಕ್ಷಿಗೆ ಐದು ತಲೆ, ಶಿರವೊಂದರಲ್ಲಿಯೆ ಮೂಡಿತ್ತು ನೋಡಾ. ಒಡಲು ಒಂದಾಯಿತ್ತು, ಬಣ್ಣ ಹದಿನಾರಾಯಿತ್ತು. ಅದರ ಚಂದ ಇಪ್ಪತ್ತೈದಾಯಿತ್ತು, ಹುಟ್ಟಿದ ಗರಿ ನೂರೊಂದಾಯಿತ್ತು. ಆ ಹಕ್ಕಿಯ ಜೀವವಿದ್ದಂತೆ ಕೊಂದು, ಸುಡದ ಬೆಂಕಿಯಲ್ಲಿ ಸುಟ್ಟು, ತಲೆಯಿಲ್ಲದ ಕಣ್ಣಿನಲ್ಲಿ ನೋಡಿ, ಬಾಯಿಲ್ಲದ ನಾಲಗೆಯಲ್ಲಿ ಸವಿದು, ಸವಿವುದಕ್ಕೆ ಮೊದಲೆ ರುಚಿಯನರ್ಪಿತವ ಮಾಡಿದ ಜ್ಞಾನಜಂಗಮವ ನೋಡಾ. ಆತನ ಇರವು ತುರುಬೊ ? ಜಡೆಯೊ ? ಅರಿಯಬಾರದಣ್ಣಾ. ಎಣ್ಣೆ ಕೊಂಡ ಮಣ್ಣಿನಂತೆ, ಅನಲ ಕೊಂಡ ದ್ರವ್ಯದಂತೆ, ಕುಸುಮ ಕೊಂಡ ಗಂಧದಂತೆ, ರಸ ಕೊಂಡ ಪಾಷಾಣದಂತೆ, ಹೆಸರಿಡಬಾರದಯ್ಯಾ, ಆ ಜಂಗಮದಿರವ. ಆ ಜಂಗಮ ಬಂದು ಎನ್ನ ಹುಳ್ಳಿಯಂ ಬಿಡಿಸಿ, ತಳ್ಳಿಯಂ ಹರಿದು, ನಿಃಕಳಂಕ ಮಲ್ಲಿಕಾರ್ಜುನನಲ್ಲಿ ತಲ್ಲೀಯವಾದ.