Index   ವಚನ - 182    Search  
 
ಒಂದು ಶಿಲೆಯೊಡೆದು ಮೂರಾದ ಭೇದವ ನೋಡಾ. ಒಂದು ಶಿಲೆ, ಶೂಲ ಕಪಾಲ ಡಿಂಡಿಮ ರುಂಡಮಾಲೆ ಐದು ತಲೆ, ತಲೆಯೊಳಗೊಬ್ಬಳು, ತೊಡೆಯೊಳಗೊಬ್ಬಳು. ಇಂತೀ ಕಡುಗಲಿಯ ದೇವನೆಂಬರು ನೋಡಾ. ಎನ್ನ ದೇವಂಗೈದು ಮುಖವಿಲ್ಲ, ಈರೈದು ಭುಜವಿಲ್ಲ. ಎನ್ನ ದೇವಂಗೆ ತೊಡೆಮುಡಿಯೊಳಾರನೂ ಕಾಣೆ. ಹಿಡಿವುದಕ್ಕೆ ಕೈದಿಲ್ಲ, ಕೊಡುವುದಕ್ಕೆ ವರವಿಲ್ಲ. ತೊಡುವುದಕ್ಕಾಭರಣವಿಲ್ಲ, ಒಡಗೂಡುವುದಕ್ಕೆಪುರುಷ[ನಿಲ್ಲ]. ತನಗೆ ಮತಿಯಿಲ್ಲ, ತನ್ನನರಿವವರಿಗೆ ಗತಿಯಿಲ್ಲ. ಗತಿಯಿಲ್ಲವಾಗಿ ಶ್ರುತಿಯಿಲ್ಲ, ಶ್ರುತಿಯಿಲ್ಲವಾಗಿ ನಾದವಿಲ್ಲ. ನಾದವಿಲ್ಲಾಗಿ ಬಿಂದುವಿಲ್ಲ, ಬಿಂದುವಿಲ್ಲವಾಗಿ ಕಳೆಯಿಲ್ಲ. ಇಂತಿವೆಲ್ಲವೂ ಇಲ್ಲವಾಗಿ ಹೊದ್ದಲಿಲ್ಲ, ಹೊದ್ದಲಿಲ್ಲವಾಗಿ ಸಂದಿಲ್ಲ, ಸಂದಿಲ್ಲವಾಗಿ ಸಂದೇಹವಿಲ್ಲ. ನಿಃಕಳಂಕ ಮಲ್ಲಿಕಾರ್ಜುನನಲ್ಲದೆ ಎಲ್ಲಿಯೂ ಕಾಣೆ.