Index   ವಚನ - 245    Search  
 
ಕಾಯಬಂಧನ ಭಾವ, ಭಾವಬಂಧನ ಜ್ಞಾನ, ಜ್ಞಾನಬಂಧನ ಸಕಲೇಂದ್ರಿಯ. ಇಂತೀ ಸ್ವರೂಪಂಗಳ ಕಲ್ಪಿಸುವಲ್ಲಿ, ಕಾಯಕ್ಕೆ ಬಂಧವಲ್ಲದೆ ಜೀವಕ್ಕೆ ಬಂಧವುಂಟೆ ಎಂದೆಂಬರು. ಭೇರಿಗೆ ಬಂಧವಲ್ಲದೆ ನಾದಕ್ಕೆ ಬಂಧವುಂಟೆ ಎಂಬರು. ಉಭಯದ ಭೇದವ ತಿಳಿದಲ್ಲಿ, ಕಾಯಕ್ಕೆ ಬಂಧವುಂಟೆ, ಜೀವಕ್ಕಲ್ಲದೆ ? ಭೇರಿಗೆ ಬಂಧವುಂಟೆ, ನಾದಕ್ಕಲ್ಲದೆ ? ಇಂತೀ ಅಳಿವುಳಿವ ಎರಡ ವಿಚಾರಿಸುವಲ್ಲಿ, ಜೀವ ನಾನಾ ಭವಂಗಳಲ್ಲಿ ಬಪ್ಪುದ ಕಂಡು, ಮತ್ತಿನ್ನಾರನೂ ಕೇಳಲೇತಕ್ಕೆ ? ನಾದ ಸ್ಥೂಲ ಸೂಕ್ಷ್ಮಂಗಳಲ್ಲಿ ಹೊರಳಿ ಮರಳುತ್ತಿಹುದ ಕಂಡು, ಆರಡಿಗೊಳಲೇಕೆ ? ಇಂತಿವ ಶ್ರುತದಲ್ಲಿ ಕೇಳಿ, ದೃಷ್ಟದಲ್ಲಿ ಕಂಡು, ಅನುಮಾನದಲ್ಲಿ ಅರಿದ ಮತ್ತೆ, ಲಿಂಗಕ್ಕೆ ಪ್ರಾಣವೋ, ಪ್ರಾಣಕ್ಕೆ ಲಿಂಗವೋ ಎಂಬುದ ಪ್ರಮಾಣಿಸಿದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.