Index   ವಚನ - 256    Search  
 
ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಿದಾಗ ಭಕ್ತಸ್ಥಲ. ಕಣ್ಣ ಮುಚ್ಚಿ ಕರ್ಣದಲ್ಲಿ ನೋಡಿದಾಗ ಮಾಹೇಶ್ವರಸ್ಥಲ. ಈ ಉಭಯ ಮುಚ್ಚಿ ನಾಸಿಕದೋವರಿ ನಷ್ಟವಾದಲ್ಲಿ ಪ್ರಸಾದಿಸ್ಥಲ. ಆ ಸುಗುಣ ದುರ್ಗುಣವೆಂಬುದು ನಿಂದಲ್ಲಿ ಪ್ರಾಣಲಿಂಗಿಸ್ಥಲ. ಆ ಪ್ರಾಣ ಪರಿತೋಷಂಗಳಲ್ಲಿ ಪ್ರವರ್ತನ ನಿಂದಲ್ಲಿ ಶರಣಸ್ಥಲ. ಆ ಶರಣ ಆರೂಢ ಸಲೆ ಸಂದು ನಿಂದಲ್ಲಿ ಐಕ್ಯಸ್ಥಲ. ಐಕ್ಯವೆಂಬ ಕೂಟಸ್ಥಲನಿಂದಲ್ಲಿ, ನಿಃಕಳಂಕ ಮಲ್ಲಿಕಾರ್ಜುನನೆಂಬ ನಾಮಕ್ಕೆ ನಷ್ಟವಿಲ್ಲ. ಆ ನಾಮವುಳ್ಳನ್ನಕ್ಕ ಎನ್ನ ಬಿರಿದಿನ ಸಾರ ಸಾಯದು.