Index   ವಚನ - 331    Search  
 
ಗೇಣಗಲದ ಹಳ್ಳ ಕುಡಿಯಿತ್ತು ಸಪ್ತಸಮುದ್ರದುದಕವ. ಗಾವುದ ಹಾದಿಯ ಊರು ಭುವನ ಹದಿನಾಲ್ಕು ಲೋಕವ ನುಂಗಿತ್ತು. ಮನೆಯೊಳಗಣ ಒರಳು ಜಂಬೂದ್ವೀಪ ನವಖಂಡ ಪೃಥ್ವಿಯ ನುಂಗಿತ್ತು. ನುಂಗಿದ ಮುಚ್ಚಳಿಗೆ ತೆರಹಿಲ್ಲದೆ ಮತ್ತೆ ಆ ಮನೆಯ ನುಂಗಿತ್ತು. ಇಂತೀ ಒಳಗಾದವನೆಲ್ಲ ಪತಂಗ ನುಂಗಿತ್ತು. ನುಂಗಿದ ಪತಂಗ ಹಿಂಗಿಯಾಡುತ್ತಿದ್ದಿತ್ತು. ಕಂಡಿತ್ತು ಬೆಂಕಿಯ ಬೆಳಗ, ಬಂದು ಸುಖಿಸಿಹೆನೆಂದು ಹೊಂದಿ ಹೋಯಿತ್ತು. ಇದರಂದವ ತಿಳಿ, ಲಿಂಗೈಕ್ಯನಾದಡೆ, ನಿಃಕಳಂಕ ಮಲ್ಲಿಕಾರ್ಜುನಾ.