Index   ವಚನ - 341    Search  
 
ಚಿನ್ನದ ಕುರುಹ ಒರೆದಲ್ಲದೆ ಅರಿಯಬಾರದು. ಚಂದನದ ಗುಣವ ಮರ್ದನಂಗೈದಲ್ಲದೆ ಗಂಧವ ಕಾಣಬಾರದು. ಇಕ್ಷುದಂಡದ ಪರಿಯ ಬಂಧಿಸಿದಲ್ಲದೆ ವಿಶೇಷವ ಕಾಣಬಾರದು. ನಾನಾ ರಸ ಗಂಧಂಗಳ ಗುಣವ ಸವಿದಲ್ಲದೆ ಕಾಣಬಾರದು. ಕ್ಷೀರದ ಘಟ್ಟಿಯ ಮಥನದಿಂದಲ್ಲದೆ ರುಚಿಸಬಾರದು. ಮಹಾತ್ಮರ ಸಂಗ ಮಹಾನುಭಾವದಿಂದಲ್ಲದೆ ಕಾಣಬಾರದು. ಇದು ಕಾರಣ, ಮಾತು ಮಾತಿಂಗೆಲ್ಲಕ್ಕೂ ಮಹದನುವುಂಟೆ ? ಲಿಂಗವ ಸೋಂಕಿದ ಮನಕ್ಕೆ ಅಂಗ ಭಿನ್ನವಾವುದೆಂದಡೆ, ಶೇಷನ ಅವಸಾನದಂತಿರಬೇಕು, ತ್ರಾಸಿನ ವಾಸದ ಭಾಷಾಂಗದಂತಿರಬೇಕು. ಹೀಂಗಲ್ಲದೆ ಸರ್ವಾನುಭಾವಿಗಳೆಂತಾದಿರಣ್ಣಾ. ಕೊಲ್ಲದ ಕೊಲೆಯ, ಗೆಲ್ಲದ ಜೂಜವ, ಬಲ್ಲತನವಿಲ್ಲದ ಬರಿವಾಯ ಮಾತಿನ ಗೆಲ್ಲ ಸೋಲಕ್ಕೆ ಹೋರಿದಡೆ, ವಲ್ಲಭ ನಿಃಕಳಂಕ ಮಲ್ಲಿಕಾರ್ಜುನನವರನೊಲ್ಲನಾಗಿ.