Index   ವಚನ - 346    Search  
 
ಜಂಗಮಕ್ಕೆ ಇಕ್ಕಿದಲ್ಲದೆ ಒಲ್ಲೆವೆಂಬ ಭಕ್ತರು ಕೇಳಿರೊ. ಆ ಜಂಗಮ ಮುಂದೆ ಬಂದು ನಿಂದಿರಲು, ತಾ ಕುಳಿತಿದ್ದು, ಏನು ಬಂದಿರಯ್ಯಾ ಎಂದು, ಉದಾಸೀನಪಕ್ಷಿತನಾಗಿ, ಆಸನವ ತೊಲಗದೆ, ಲೇಸ ನುಡಿಯದೆ, ವಾಸಿವಟ್ಟಕ್ಕೆ ಕೂಳನಿಕ್ಕುವ ದಾತರಿಗೆಲ್ಲಿಯದೊ, ಜಂಗಮಲಿಂಗದ ಪೂಜೆ ? ಮನವೊಲಿದು ಮಾಡುವ ಭಕ್ತನ ಸ್ಥಲ, ತಾ ಹೋಹಲ್ಲಿ, ಜಂಗಮ ಬಾಹಲ್ಲಿ ಇದಿರೇಳಬೇಕು. ಮೆಟ್ಟಡಿಯಂ ಕಳೆದು, ಬಟ್ಟೆಯಂ ತೊಲಗಿ, ಸಾಷ್ಟಾಂಗವೆರಗಿ, ಪ್ರತಿಶಬ್ದವಿಲ್ಲದೆ ಕೈಕೊಂಡು, ತ್ರಿಕರಣಶುದ್ಧನಾಗಿ ಕೊಡುವುದ ಕೊಟ್ಟು, ತನಗೆ ಬೇಕಾದುದ ಕೇಳಿಕೊಂಡು, ಭಾವಿಸಬಲ್ಲಡೆ, ಅದೇ ಸದ್ಭಕ್ತಿ, ಅದೇ ಜೀವನ್ಮುಕ್ತಿ. ಇಷ್ಟವನರಿಯದೆ, ಕಾಬವರ ಕಂಡು, ಮಾಡುವರ ನೋಡಿ ಮಾಡುವ ಮಾಟ, ರಾಟಾಳದ ಕಂಭದ ಪಾಶದಂತೆ. ಆಶೆಕರನೊಲ್ಲೆನೆಂದ ನಿಃಕಳಂಕ ಮಲ್ಲಿಕಾರ್ಜುನಾ.