Index   ವಚನ - 350    Search  
 
ಜಗದಲ್ಲಿ ಸುಳಿವ ಗುರುಗಳ ಉಪದೇಶದ ಬೋಧೆಯ ಚೋರತನವ ಕಂಡು ಅಂಜಿದೆನಯ್ಯಾ. ಮನೆಯ ಕೂಡಿಕೊಂಡು ಅನ್ನವನಿಕ್ಕಿದಲ್ಲಿ ಸುಳಿವ ಚೋರರ ಕಂಡು ಗುರುವೆನಲಾರೆ.ಅದೆಂತೆಂದಡೆ: ಮಹತ್ತರವಪ್ಪ ಜ್ಯೋತಿರ್ಲಿಂಗವ ಕೈಯಲ್ಲಿ ಕೊಟ್ಟು, ಪಾತಕವಪ್ಪ ಫಲಭೋಗಂಗಳ ಕೈಯಲ್ಲಿ ಕೊಟ್ಟು, ಅಜಾತರೆಂದಡೆ ನಾಚಿದೆನಯ್ಯಾ. ಇಂತೀ ಭ್ರಾಂತರ ಕಂಡು ವಂದಿಸಲಾಗದು, ತನ್ನ ರೋಗಕ್ಕೆ ನಿರ್ವಾಹವ ಕಾಣದೆ, ಇದಿರ ರೋಗವ ಮಾಣಿಸಿಹೆನೆಂದು, ಮದ್ದಿನ ಚೀಲವ ಹೊತ್ತು ಸಾವ ಕದ್ದೆಹಕಾರನಂತೆ, ಕ್ಷುದ್ರಜೀವಿಗೆಲ್ಲಿಯದು ಸದ್ಗುರುಸ್ಥಲ ? ಸದ್ಗುರುವಾದಡೆ ಅವ ಬದ್ಧನಾಗಿರಬೇಕು. ತಂತ್ರದಲ್ಲಿ ಹೋಹ ಮಂತ್ರದಂತಿರಬೇಕು. ಮಂದಾರದಲ್ಲಿ ತೋರುವ ಸುಗಂಧದಂತಿರಬೇಕು. ಇಂತಿಪ್ಪ ಗುರುವಿಂಗಿಹವಿಲ್ಲ, ಪರವಿಲ್ಲ, ಭಾವಕ್ಕೆ ಭ್ರಮೆಯಿಲ್ಲ. ಆ ಗುರುವಿನ ಕೈಯಲ್ಲಿ ಬೋಧಿಸಿಕೊಂಡ ಶಿಷ್ಯಂಗೆ ತುಪ್ಪವನಿಕ್ಕಿದ ಚಿತ್ತೆಯಂತೆ ಸ್ಫಟಿಕವ ಸಾರಿದ ಒರತೆಯಂತೆ. ಹೀಂಗಲ್ಲದೆ, ಗುರುಶಿಷ್ಯಸಂಬಂಧವಾಗಬಾರದು. ಇದನರಿಯದಿರ್ದಡೆ ಅಂಧಕನ ಕೈಯ ಅಂಧಕ ಹಿಡಿದಂತೆ, ಪಂಗುಳ[ನ]ಲ್ಲಿ ಚಂದವನರಸುವನಂತೆ, ಸ್ವಯಾನಂದಭರಿತ, ನಿಃಕಳಂಕ ಮಲ್ಲಿಕಾರ್ಜುನಾ.