Index   ವಚನ - 351    Search  
 
ಜನನ ಮರಣಕ್ಕೊಳಗಹ ಆತ್ಮನ ಪರಿಭವಕ್ಕೆ ಬರ್ಪುದು, ಇಲ್ಲವೆಂದು ನುಡಿವುತ್ತಿಹರು ಅಧ್ಯಾತ್ಮಯೋಗಿಗಳು. ಶರೀರದಲ್ಲಿ ಸೋಂಕಿದ ವ್ಯಾಧಿ ಆತ್ಮಂಗಲ್ಲದೆ ಶರೀರಕ್ಕುಂಟೆ ? ಘಟಕ್ಕೆ ನೋವಲ್ಲದೆ ಆತ್ಮಂಗೆ ನೋವೆಲ್ಲಿಯದೆಂಬುದು ಹುಸಿ. ಘಟದಲ್ಲಿ ತೋರುವ ಆತ್ಮನು ಘಟವ ಬಿಟ್ಟು, ಮತ್ತೆ ಘಟಕ್ಕೆ ಚೇತನಿಸಬಲ್ಲುದೆ ? ನಾನಾ ಸುಖಂಗಳ ಸುಖಿಸಬಲ್ಲುದೆ ? ಇದು ಕಾರಣ, ಕ್ರೀಯೆವಿಡಿದು ಮಾಡುವಂಗೆ ಕರ್ಮಶೇಷವಿಲ್ಲ, ನಿಃಕ್ರೀಯಲ್ಲಿ ಚರಿಸುವಂಗೆ ನಾನಾ ಭವವುಂಟಾಗಿ. ಇಂತೀ ಆತ್ಮನಲ್ಲಿ ಪರಿಭವಕ್ಕೆ ಬರಬಾರದು. ಬಂದಡೆ ಅಳಿವು ಉಳಿವನರಿಯಬೇಕು, ಅರಿಯಲಾಗಿ ಮರೆಯಬೇಕು. ಆ ಮರವೆ ತಾನೆ ತೆರಹಿಲ್ಲದರಿಕೆ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.