Index   ವಚನ - 359    Search  
 
ಜ್ಞಾತೃಚಕ್ಷುವಿನಿಂದ ಜಗದ ರೂಪ ಕಾಬಲ್ಲಿ, ಜ್ಞಾನಚಕ್ಷುವಿನಲ್ಲಿ ಕಾಬ ಸ್ವಪ್ನಂಗಳು, ಜ್ಞೇಯಚಕ್ಷುವಿನಲ್ಲಿ ಕೂಡಿ ಕಾಬ ಸುಖಂಗಳು. ಇಂತೀ ತ್ರಿವಿಧ ದೃಷ್ಟಂಗಳ ಕಾಬುದೆಲ್ಲ ಜ್ಞಾತೃವಿನಲ್ಲಿ ಉಪದೃಷ್ಟ, ಜ್ಞಾನದಲ್ಲಿ ಸ್ವಪ್ನದೃಷ್ಟ, ಜ್ಞೇಯದಲ್ಲಿ ಕೂಟದೃಷ್ಟವಾಗಿ ಕಾಬುದು ತನುತ್ರಯದ ಭೇದವೋ, ಆತ್ಮತ್ರಯದ ಭೇದವೋ ? ಆತ್ಮನೊಂದೆಂದಡೆ ಘಟ ಪರಿಕರಂಗಳಾಗಿ ತೋರುತ್ತಿಹವಾಗಿ, ಆತ್ಮನ ಏಕವೆನಬಾರದು. ಆತ್ಮನ ಹಲವೆಂದಡೆ, ಮೃದು ಕಠಿನ ಶೀತ ಉಷ್ಣಾದಿಗಳಲ್ಲಿ ಹೆಚ್ಚುಕುಂದಿಲ್ಲದೆ, ಆತ್ಮಂಗೆ ಒಂದೆ ಭೇದವಾಗಿ ತೋರುತ್ತಿಹವಾಗಿ, ಆತ್ಮನ ಹಲವೆನಬಾರದು. ಇಂತೀ ಘಟಭೇದವನರಿತು, ಆತ್ಮನ ಸುಖದುಃಖವನರಿತು, ಭಕ್ತಿಗೆ, ಸತ್ಯ ವಿರಕ್ತಿಗೆ, ಮಲತ್ರಯದೂರ ಸರ್ವಜೀವಕ್ಕೆ ಹೆಚ್ಚುಕುಂದಿಲ್ಲದೆ ನಿಶ್ಚಯವಾಗಿ ನಿಂದ ನಿಶ್ಚಿಂತನಂಗವೆ ಷಟ್ಸ್ಥಲ. ಬ್ರಹ್ಮವೇ ಸರ್ವಸ್ಥಲಭರಿತ ಸರ್ವಾಂಗಲಿಂಗಿ, ಆತ ನಿಃಕಳಂಕ ಮಲ್ಲಿಕಾರ್ಜುನ ತಾನು ತಾನೆ.