Index   ವಚನ - 382    Search  
 
ತಮಂಧವೆಂಬ ಕೊಪ್ಪರಿಗೆಯಲ್ಲಿ, ತಾರಾಮಂಡಲದ ಉದಕವ ತುಂಬಿ, ಮಹಾಂಧಕಾರದಿಂದುರುಹಲಾಗಿ ದಾವಾನಳವೆದ್ದಿತ್ತು. ವಿಶ್ವಾಸಭಕ್ತಿಯೆಂಬ ಅಟ್ಟಕಳಿಯನಿಕ್ಕಿ, ಚಿತ್ತಶುದ್ಧದ ಕೈಯಲ್ಲಿ ಒರಸಲಾಗಿ, ರುದ್ರನ ಜಡೆಮಣ್ಣು ಬಿಟ್ಟಿತ್ತು, ಮಂದಿರಕ್ಕೊಳಗಾಯಿತ್ತು. ಮಣ್ಣ ಬಿಟ್ಟು ಮಂಡೆ ಚೆನ್ನಾಯಿತ್ತು. ಮಂಡೆಯ ಹತ್ತಿ ನೋಡಲಾಗಿ, ಮೂರು ಮಂಡಲ ಕಾಣಲಾಯಿತ್ತು. ಒಂದು ಮಂಡಲ, ಉಪದೇಶವ ಹೇಳುವ ಗುರುವಿನ ಬಾಯ ನುಂಗಿತ್ತು. ಮಧ್ಯಮಂಡಲ ಶುದ್ಧವೆಂದು ಕೊಟ್ಟ ಲಿಂಗವ ಗರ್ಭೀಕರಿಸಿತ್ತು. ಬಟ್ಟಬಯಲ ಕಟ್ಟಕಡೆಯ ಮಂಡಲ ಸುತ್ತಿತ್ತು. ಜಂಗಮವ ನಿಷ್ಠೆಯಿಂದ ಪೂಜಿಸುವ, ಭಕ್ತರ ಬಟ್ಟೆ ಹುಳು ಹತ್ತಿತ್ತು. ಆ ಬಟ್ಟೆಯ ಹೊಲಬುತಪ್ಪಿ ಸುತ್ತಿಯಾಡುತ್ತಿಹ ಸದ್ಭಕ್ತರಿಗಿನ್ನೆತ್ತಣ ಮುಕ್ತಿಯೊ, ನಿಃಕಳಂಕ ಮಲ್ಲಿಕಾರ್ಜುನಾ ?