Index   ವಚನ - 386    Search  
 
ತಲೆಯಿಲ್ಲದೆ, ಹಾವು ಕಚ್ಚಿ, ವಿಷ ಹತ್ತುವುದಕ್ಕೆ ಮೊದಲೆ ಜೀವ ಸತ್ತಿತ್ತು. ಜೀವ ಬಿದ್ದು, ಘಟದ ಬಂಧುಗಳೆಲ್ಲರೂ ಕೂಡಿ ಶೋಕವ ಮಾಡುತ್ತಿದ್ದಹರು. ಅವರೊಳಗೊಬ್ಬ ನಗುತ್ತಿದ್ದಹನು. ನಗುವನ ಕಂಡು ಒಬ್ಬ ಹೆಣನ ಬಾಯ ಹೊಯ್ದು, ಐವರ ಮೂಗ ಕೊಯ್ದು, ಐವತ್ತಿಬ್ಬರ ನಾಲಗೆಯ ಕೀಳುವುದ ಕಂಡಂಜಿ, ಹದಿನಾರು ಮಂದಿ ಹಳುಹಾದರು, ಎಂಟು ಬಂಟರು ಕಂಟಕನಾಶವಾದರು. ಇಪ್ಪತ್ತೈದು ಮಂದಿ ಸೊಪ್ಪಡಗಿದರು. ಇವರೆಲ್ಲರ ಕಳೆವನ್ನಕ್ಕರ ಕತ್ತಲೆ ಹರಿದು ಬೆಳಗಾಯಿತ್ತು, ಅಂಗೈಯೊಳಡಗಿದ ಬರಿಯ ಕಂಗಳಿಗೆ ತಂದೆ. ಕಂಗಳು ನುಂಗಿ ಹಿಂಗದಿರ್ದೆ, ನೀ ಸತ್ತೆ, ನಾ ಸಾಯೆ. ಸಾವವರ ಕಂಡು ಸಾವಧಾನಿಯಾಗಿರ್ದೆನಯ್ಯಾ. ಆದ ಮತ್ತೆ ಆದೆಹೆ ಆಗೆನೆಂಬುದಿಲ್ಲ, ನಿಃಕಳಂಕ ಮಲ್ಲಿಕಾರ್ಜುನನ ಏನೆಂದು ಎನಲಿಲ್ಲವಾಗಿ.