Index   ವಚನ - 482    Search  
 
ಪಾಪ ಪುಣ್ಯವೆಂದು ಹೇಳುವ ಕೂಪರಪ್ಪ ಭಕ್ತರು ಕೇಳಿರಣ್ಣಾ, ಎನಗೆ ನಾ ಕಾಣದೆ ನಿಂದಿಸುವವನಲ್ಲ, ಕಂಡು ನುಡಿವವಲ್ಲ. ಅಂದಗಾರಿಕೆಯಲ್ಲಿ ನುಡಿವವನಲ್ಲ. ಉಂಬಾಗ ಜಂಗಮವೆಂದು, ಸಂಜೆಗೆ ಕಳ್ಳನೆಂದು ಹಿಂಗಿ ನುಡಿವನವನಲ್ಲ. ವಂದಿಸಿ ನಿಂದಿಸುವ ಸಂದೇಹದವನಲ್ಲ. ಎನಗೆ ಅಂದಂದಿಗೆ ನೂರಿಪ್ಪತ್ತು ಸಂದಿತ್ತು. ಎನ್ನ ನಿನ್ನ ಬಂಧವ ಹೇಳಿರಣ್ಣಾ. ದ್ವಿತೀಯ ಶಂಭು ಬಸವಣ್ಣ ಮೊದಲಾದ ಅಸಂಖ್ಯಾತ ಪ್ರಮಥಗಣಂಗಳು, ನೀವು ಹೋದ ಹೊಲಬಿನ ಹಾದಿಯಲ್ಲದೆ ಎನಗೊಂದು ಹಾದಿಯಿಲ್ಲ. ಬೊಂಬೆಗೆ ಸ್ವತಂತ್ರವಿಲ್ಲ, ಆಡಿಸುವ ಸೂತ್ರಧಾರಿಗಲ್ಲದೆ. ಐದರಲ್ಲಿ ಹುದುಗಿದ, ಇಪ್ಪತ್ತೈದರಲ್ಲಿ ಕೂಡಿದ, ಒಂದರಲ್ಲಿ ಉಳಿದ, ನಿಜಸಂಧಿಯಲ್ಲಿ ನಿಂದು ವಂದನೆಯ ಮಾಡುತ್ತ ಇದ್ದೇನೆ. ಇದರಂದವ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.