Index   ವಚನ - 532    Search  
 
ಬಿದ್ದ ಬೀಜ, ಇಕ್ಕಿದ ಸಸಿ ಮುಂತಾದವಕ್ಕೆ ಬೇರು ಬಿಟ್ಟಲ್ಲದೆ ಮೊಳೆಗೆ ಅಂಕುರವಿಲ್ಲ. ಸಸಿಗೆ ಹೊಸಬೇರು ಬಿಟ್ಟಲ್ಲದೆ ಎಲೆದೋರದು. ಚಿತ್ತ ವಸ್ತುವಿನಲ್ಲಿ ನಿಂದಲ್ಲದೆ ನಾನಾ ಸ್ಥಲಂಗಳ ವಿವರವ ಮುಟ್ಟದು. ಸಸಿ ಬಲಿದು ಹೊಸಸುಳಿ ತೋರಿದಲ್ಲಿಯಲ್ಲದೆ ಆ ತುಷಪರ್ಣ ಬಿಡದು. ಅಂಗಕ್ಕೆ ಕ್ರೀ, ಆತ್ಮಂಗೆ ಅರಿವು ಉಭಯ ಸಂಬಂಧವಾಗಿಯಲ್ಲದೆ, ಲಿಂಗವೆಂಬ ಕುರುಹಿಲ್ಲ. ಆ ಕುರುಹು ಉಭಯವ ನೆಮ್ಮಿ ನಿಂದುದು ಭಕ್ತಸ್ಥಲ. ಆ ಭಕ್ತಿ ತ್ರಿವಿಧವ ನೆಮ್ಮಿ ನಿಂದುದು ಮಾಹೇಶ್ವರಸ್ಥಲ. ಆ ಮಾಹೇಶ್ವರಸ್ಥಲ ಮೂರ ಮೆಟ್ಟಿ ಆರ ಕಂಡುದು ಪ್ರಸಾದಿಸ್ಥಲ. ಆರಡಗಿ ಬೇರೆ ಒಂದೆಯೆಂದಲ್ಲಿ ಪ್ರಾಣಲಿಂಗಿಸ್ಥಲ. ಒಂದೆಂಬುದು ನಿಂದು ಸಂದನಳಿದಲ್ಲಿ ಶರಣಸ್ಥಲ. ಶರಣನ ಆಯಿದುಗೂಡಿ ಪ್ರಮಾಣ ನಷ್ಟವಾದಲ್ಲಿ ಐಕ್ಯಸ್ಥಲ. ಇಂತೀ ಷಡ್ಭಾವ ಸ್ಥಲಂಗಳು ಆಕಾಶವ ನೆಮ್ಮಿ, ಮಹದಾಕಾಶದೊಳಗಾಯಿತ್ತು. ಅದು ಭಾವವಿಲ್ಲದ ಬ್ರಹ್ಮ, ನಿಃಕಳಂಕ ಮಲ್ಲಿಕಾರ್ಜುನಾ.