Index   ವಚನ - 572    Search  
 
ಭಕ್ತರು ಭವಪಾಶದಲ್ಲಿದ್ದಹರೆಂದು ತೆಗೆವುದಕ್ಕೆ ಸುಳಿವ ಜಂಗಮದ ಇರವೆಂತೆಂದಡೆ: ಆಸೆಯೆಂಬ ಪಾಶವ ಹರಿದು, ಈ ಷಣತ್ರಯದ ದೋಷವ ತರಿದು, ತಾನೇತರಾಸೆಯಿಲ್ಲದೆ, ತನುವಿಂಗೆ ಶೀತೋಷ್ಣಾದಿ ಭೋಗಂಗಳೆಂಬ ಸುಖಂಗಳಂ ಮರೆದು, ಜಿಹ್ವೆಗೆ ಮಧುರರಸ ನಾನಾ ಪರಿಕರಂಗಳಂ ಮರೆದು, ಭಕ್ತರಿಗೆ ಇಚ್ಫೆಯಂ ನುಡಿವ, ಕುಚಿತ್ತರಂ ಬಿಟ್ಟು ಚಿತ್ತಶುದ್ಧನಾಗಿ, ಇದ ನಿಶ್ಚಯವೆಂದರಿದ ಮತ್ತೆ ಮೆಚ್ಚಲೇಕೊ, ನಾನಾ ಮೋಹಂಗಳ ? ವಿರಕ್ತಿಯಿಂದ ಸುಳಿವ ಜಂಗಮಕ್ಕೆ ಮತ್ತೆ ನರರೊಂದಾಗಿ ಸುತ್ತಿ ಬಳಲಲೇಕೊ ? ಇದು ಕಾರಣ, ವರ್ಮವನರಿಯದೆ ಮಾಡುವ ಭಕ್ತ ಕರ್ಮಕ್ಕೊಳಗಾದ. ಧರ್ಮವನರಿಯದೆ ತಿರುಗುವ ಜಂಗಮ ಬ್ರಹ್ಮನಿಗೊಳಗಾದ. ಇವರಿಬ್ಬರೂ ಕೆಟ್ಟ ಕೇಡ ನೋಡಿ ಬೆಚ್ಚಿದೆನಯ್ಯಾ, ನಿಃಕಳಂಕ ಮಲ್ಲಿಕಾರ್ಜುನಾ.