ಭಕ್ತಿಯಿಂದ ಮಾಡುವುದೆಲ್ಲವು ಬ್ರಹ್ಮನ ಒಡಲು.
ಜ್ಞಾನದಿಂದರಿದು ಮಾಡುವುದೆಲ್ಲವು ವಿಷ್ಣುವಿನ ಒಡಲು.
ವೈರಾಗ್ಯ ತೋರಿ ಮಾಡುವುದೆಲ್ಲವು ರುದ್ರನ ಒಡಲು.
ಶ್ರದ್ಧೆಯಿಂದ ಮಾಡುವ ಭಕ್ತಿ ಬ್ರಹ್ಮನ ಉತ್ಪತ್ಯಕ್ಕೆ ಈಡಾಯಿತ್ತು.
ಧರ್ಮವ ಕುರಿತು ಮಾಡುವ ಭಕ್ತಿ
ವಿಷ್ಣುವಿನ ಅವತಾರಕ್ಕೆ ಸಲೆ ಸಂದಿತ್ತು.
ಬಯಕೆ ಹಿಂಗಿ ಮಾಡುವ ಭಕ್ತಿ ರುದ್ರನ ಆವೇಶಕ್ಕೊಳಗಾಗಿತ್ತು.
ಇಂತೀ ಭಕ್ತಿ ಜ್ಞಾನ ವೈರಾಗ್ಯವೆಂಬವು,
ಸಂದಿಲ್ಲದ ಸಂದೇಹದಲ್ಲಿ ಬರ್ಪುದು ತಪ್ಪದೆಂದು ಶರ್ವನ ಮುಂಡಿಗೆ ಹಾಕಿದೆ.
ಎತ್ತಬಲ್ಲ ದೃಷ್ಟವಂತರು ಸರ್ಪನೇಳುವುದಕ್ಕೆ ಮೊದಲೆ ಎತ್ತಿರಣ್ಣಾ.
ಎತ್ತಿ ಹೇಳಿಗೆಯ ಕೂಡಿ ಮುಚ್ಚಳವನಿಕ್ಕಿದ ಮತ್ತೆ,
ಮುತ್ತೆರದ ಮುಕ್ತಿಯಿಲ್ಲಾ ಎಂದೆ, ನಿಃಕಳಂಕ ಮಲ್ಲಿಕಾರ್ಜುನಾ.