Index   ವಚನ - 587    Search  
 
ಭಕ್ತಿಸ್ಥಲವಾರು, ಮಹೇಶ್ವರಸ್ಥಲವಾರು, ಪ್ರಸಾದಿಸ್ಥಲವಾರು, ಪ್ರಾಣಲಿಂಗಿಸ್ಥಲವಾರು, ಶರಣಸ್ಥಲವಾರು, ಐಕ್ಯನ ಐಕ್ಯ ಆರೆಂಬಲ್ಲಿ, ನೇತಿಗಳೆದು ಸ್ಥಲನಿಂದ ಮತ್ತೆ ಐಕ್ಯನ ಆರುಕೂಟವಾವುದಯ್ಯಾ ? ಅದು ದರ್ಪಣದ ಭಾವದೊಪ್ಪ. ಅದು ಭಾಗೀರಥಿಯ ಅಪ್ಪುವಿನ ಭೇದ. ಇದು ಆರ ಭಾವಕ್ಕೂ ತಪ್ಪದ ಸ್ಥಲ. ಸಂದೇಹವುಳ್ಳನ್ನಕ್ಕ ಷಟ್ಸ್ಥಲ, ಸಂದೇಹ ನಿಂದು ಒಂದೆಂದಲ್ಲಿ ಏಕಸ್ಥಲ. ಏಕಸ್ಥಲ ಪ್ರತಿರೂಪಾಗಿ ಕರ್ತೃಭೃತ್ಯನೆಂಬ ಉಭಯರೂಪಾಯಿತ್ತು. ಉಭಯದ ರೂಪಿಂದ ಹಲವು ಸ್ಥಲ ಒಲವರವಾಯಿತ್ತು. ಆ ಹೊಲಬ ತಿಳಿದು, ಸಲೆ ವಸ್ತು ಒಂದೆಂದಲ್ಲಿ ಸ್ಥಲಲೇಪ, ನಿಃಕಳಂಕ ಮಲ್ಲಿಕಾರ್ಜುನಲಿಂಗವೆಂಬ ಕುರುಹಡಗಿದಲ್ಲಿ.