Index   ವಚನ - 586    Search  
 
ಭಕ್ತಿಸ್ಥಲವಳವಟ್ಟಲ್ಲಿ, ಮಾಟಕೂಟವೆಂಬ ಕೋಟಲೆಯೇತಕ್ಕೆ ? ಮಾಹೇಶ್ವರಸ್ಥಲವಳವಟ್ಟಲ್ಲಿ, ಅಹುದು ಅಲ್ಲಾ ಎಂಬ ದುಃಖವೇತಕ್ಕೆ ? ಪ್ರಸಾದಿಸ್ಥಲವಳವಟ್ಟಲ್ಲಿ, ಉಂಡೆಹೆ ಉಟ್ಟೆಹೆನೆಂಬ ದಂದುಗವೇತಕ್ಕೆ ? ಪ್ರಾಣಲಿಂಗಿಸ್ಥಲವಳವಟ್ಟಲ್ಲಿ, ಜನನ ಮರಣವೆಂಬ ಕುರುಹೇತಕ್ಕೆ ? ಶರಣಸ್ಥಲವಳವಟ್ಟಲ್ಲಿ, ಸುಖದುಃಖ ಭೋಗಾಧಿಗಳಲ್ಲಿ ಹೊಡೆಗೆಡೆಯಲೇತಕ್ಕೆ ? ಐಕ್ಯಸ್ಥಲವಳವಟ್ಟಲ್ಲಿ, ನಾಮರೂಪಕ್ರೀಯೆಂದು ಭಾವವ ಲಕ್ಷಿಸಲೇತಕ್ಕೆ ? ಇಂತಿವು ಆರಂಕಣದ ಮನೆಯ ಬಾಡಿಗೆಯ ಹಿಡಿದು, ಮೀರಿತು ಘನ ಕಿರಿದೆಂದು ಹೊಯಿದಾಡುವಂತೆ, ಈ ದೂರ ಇನ್ನಾರಿಗೆ ಹೇಳುವೆ, ನಿಃಕಳಂಕ ಮಲ್ಲಿಕಾರ್ಜುನಾ ? ಗಾರಾಗದ ಮುನ್ನವೆ ತೋರಿಕೆಯೇತಕ್ಕಡಗದು ?