Index   ವಚನ - 623    Search  
 
ಮರ್ತ್ಯಕ್ಕೆ ಸಂಗನಬಸವಣ್ಣ ಬಾಹಲ್ಲಿ, ಮೂರು ಮಹಾರತ್ನವ ಕಂಡು, ಒಂದ ಸಿರಿಯ ಕೈಯಲ್ಲಿ ಕೊಟ್ಟ, ಒಂದ ಗಿರಿಯ ಕೈಯಲ್ಲಿ ಕೊಟ್ಟ, ಒಂದ ಉರಿಯ ಕೈಯಲ್ಲಿ ಕೊಟ್ಟ. ಇಂತೀ ಮೂರು ರತ್ನಕ್ಕೆ ಲಯ ಈರೇಳುಲೋಕ ಹದಿನಾಲ್ಕು ಭುವನವೆಲ್ಲವೂ ಆ ಮೂರು ರತ್ನದ ಬೆಳಗಿನಲ್ಲಿ, ತೊಳಗಿ ಆಡುತ್ತಿಪ್ಪವರ ನೋಡಾ. ಒಂದು ರತ್ನ ಬಂದ ಬೆಳಗು, ಒಂದು ರತ್ನ ಮಂದ ಬೆಳಗು, ಒಂದು ರತ್ನ ಸಂದೇಹ ಬೆಳಗು. ಇಂತೀ ರತ್ನವ ತಂದು, ಸಂಗನಬಸವಣ್ಣ ಸಂಗಮೇಶ್ವರದೇವರಲ್ಲಿ ಐಕ್ಯವಾದೆಹೆನೆಂದು ಹರ್ಷಂಬಡುತ್ತಿಹ. ಇದ ಕಂಡು, ಎನ್ನ ಮನಕ್ಕೆ ನಾಚಿಕೆಯಾಯಿತ್ತು. ವರ್ಮವನರಿಯದೆ ಇಕ್ಕಿ ಕೆಟ್ಟನೆಂದು, ತನ್ನ ಕಾಯ್ದು, ಇದಿರ ಕಾಯ್ದ ಶೂರನಂತಿರಬೇಕು. ತಾರಣದಲ್ಲಿ ನಿಂದು, ಅಂಜಿ ಹೋಗುತ್ತಿರ್ಪವರ ಕಂಡು, ಅಂಜದಿರೆಂದು ಹೇಳುವ ಧೀರನಂತಿರಬೇಕು. ಇಂತೀ ವರ್ಮವನರಿಯದೆ ಮಾಡಿ, ಧರ್ಮಕ್ಕೊಳಗಾದ ಬಸವಣ್ಣನ ಹಾದಿಯಂ ಬಿಡಿಸಿ, ಚೆನ್ನಬಸವಣ್ಣನ ಹಾದಿಯ ತೋರು ನಿಃಕಳಂಕ ಮಲ್ಲಿಕಾರ್ಜುನಾ.