ಮಾಂಸಪಿಂಡವ ಕಳೆದು ಮಂತ್ರಪಿಂಡವ ಮಾಡಿದೆವೆಂದು
ಸಂತೈಸಿಕೊಂಬಾದ್ಯರು ನೀವು ಕೇಳಿರಯ್ಯಾ.
ಭ್ರಮರ ಕೀಟಕವ ತಂದಳಿದು ತನ್ನಂತೆ ಮಾಡಿದುದಿಲ್ಲವೆ ?
ಚಕ್ರ ಮೃತ್ತಿಕೆಯ ತಂದು ತನ್ನ ನೆನಹಿನಲ್ಲಿ ತೋರಿದ
ಗುಣ ಕುಂಭವ ಮಾಡಿದುದಿಲ್ಲವೆ ?
ಕಾರುಕಶಿಲೆಯ ತಂದು ತನ್ನ ಮನಕ್ಕೆ ತೋರಿದ
ಸ್ವರೂಪವ ಮಾಡಿದುದಿಲ್ಲವೆ ?
ಇಂತಿವೆಲ್ಲವು ಹಿಡಿದವರ ಗುಣಕ್ಕೊಳಗಾದವು.
ಇದನರಿಯದೆ ನಾವು ಗುರುವಾದೆವೆಂದು,
ಇದಿರು ಶಿಷ್ಯರೆಂದು ಭಾವಿಸಿ, ಸೇವೆಯ ಕೊಂಬ ಗುರು,
ಹರಿದ ಹರುಗೋಲನೇರಿ ತೊರೆಯ ಪಾಯ್ವುದಕ್ಕೆ ತೆರನಿಲ್ಲದೆ,
ಅದರಡಿಯಲ್ಲಿ ತುಂಬಿ ಸೂಸುವ ತೆರ ನಿಮಗಾಯಿತ್ತು,
ನಿಃಕಳಂಕ ಮಲ್ಲಿಕಾರ್ಜುನಾ.