Index   ವಚನ - 663    Search  
 
ರಣಕ್ಕೆ ಅಲಗೇರಿದಲ್ಲಿ ಹಲುಬಿದಡೆ ಬಿಡುವರೆ ? ಭಕ್ತಿಗೊರೆಗಟ್ಟಿ ತಪ್ಪಿಹೆನೆಂದಡೆ ಬಿಡುವರೆ? ಸತ್ಯನಾಗಿದ್ದು ಅಸತ್ಯಕ್ಕೆ ಒಡಲಪ್ಪನೆ? ವಿರಕ್ತನಾಗಿದ್ದು ತಥ್ಯಮಿಥ್ಯಕ್ಕೆ ಹೋರುವನೆ ? ಇಂತೀ ಗುಣವ ತಾನರಿದು ತಿಳಿದು, ತನ್ನಲ್ಲಿ ಬಂದ ಗುಣದೋಷವ ಅನ್ಯರು ನುಡಿದರೆಂದು ಭಿನ್ನವ ಮಾಡಿ ನೋಡುವನ್ನಕ್ಕ, ಭಕ್ತಂಗೆ ಸತ್ಯವಿಲ್ಲ, ವಿರಕ್ತಂಗೆ ಜ್ಞಾನವಿಲ್ಲ. ನಾನು ಇವನಾಡಿ ನೊಂದಹರೆಂಬ ಭಾವ ಎನಗಿಲ್ಲ. ಕಣ್ಣಿನೊಳಗಣ ಕಸ, ಕಾಲೊಳಗಣ ಮುಳ್ಳು, ಆವ ಬಗೆಯಿಂದ ಹೋದಡೆ ಲೇಸು, ನಿಃಕಳಂಕ ಮಲ್ಲಿಕಾರ್ಜುನಾ.