Index   ವಚನ - 685    Search  
 
ಲಿಂಗಾಂಗಿಯೆಂದು ಜಗದಲ್ಲಿ ಸುಳಿವ ಜಂಗಮಲಿಂಗವೆ ಕೇಳಿರಯ್ಯಾ, ಭೃತ್ಯನ ಬಿನ್ನಹವ. ಲಿಂಗವೇ ಅಂಗವಾದ ಮತ್ತೆ, ಹೆಣ್ಣಿನ ವಿಷಯಕ್ಕೆ ಸಿಕ್ಕಿ, ಬಣ್ಣಗೆಟ್ಟಿರಲ್ಲಾ. ಹೊನ್ನಿನಾಶೆಗೆ ಸಿಕ್ಕಿ, ಪ್ರಸನ್ನವಪ್ಪ ಲಿಂಗವ ಮರೆದಿರಲ್ಲಾ. ಮಣ್ಣಿಗೆ ಆಶೆಮಾಡಿ, ಘನಲಿಂಗವನರಿಯದೆ ಘಾಸಿಯಾದಿರಲ್ಲಾ. ಜಂಗಮಲಿಂಗವ ನುಡಿದಡೆ ಸಮಯಕ್ಕೆ ದೂರ, ತಾಳಿದಡೆ ಜ್ಞಾನಕ್ಕೆ ದೂರ. ಬಿಡಬಾರದು, ಪೂಜಿಸಿ ಹಿಡಿಯಬಾರದು, ಮನಮುಟ್ಟದಾಗಿ. ಹಡಿಯಡಿಯಲ್ಲಿ ಸಿಕ್ಕಿದ ತುಡುಗುಣಿನಾಯಂತೆ ಮೊರೆಯಿಡುತ್ತಿದ್ದೇನೆ. ನಿಮ್ಮಡಿಗಳ ಬಿಡುಮುಡಿಯನರಿಯದೆ, ಎನ್ನೊಡೆಯನೆ ಕೇಳಾ, ನಿಃಕಳಂಕ ಮಲ್ಲಿಕಾರ್ಜುನಾ.