Index   ವಚನ - 705    Search  
 
ವೃಕ್ಷ ಬೀಜವ ನುಂಗಿತ್ತೋ, ಬೀಜ ವೃಕ್ಷವ ನುಂಗಿತ್ತೋ ಎಂಬುದನರಿದಾಗವೆ ಭಕ್ತಸ್ಥಲ.ಮುತ್ತು ಜಲವ ನುಂಗಿತ್ತೋ, ಜಲವು ಮುತ್ತು ನುಂಗಿತ್ತೋ ಎಂಬುದನರಿದಾಗವೆ ಮಾಹೇಶ್ವರಸ್ಥಲ. ಪ್ರಭೆ ಪಾಷಾಣವ ನುಂಗಿತ್ತೋ, ಪಾಷಾಣ ಪ್ರಭೆಯ ನುಂಗಿತ್ತೋ ಎಂಬುದನರಿದಾಗವೆ ಪ್ರಸಾದಿಸ್ಥಲ. ವಹ್ನಿ ಕಾಷ್ಠವ ನುಂಗಿತ್ತೋ, ಕಾಷ್ಠ ವಹ್ನಿಯ ನುಂಗಿತ್ತೋ ಎಂಬುದನರಿದಾಗವೆ ಪ್ರಾಣಲಿಂಗಿಸ್ಥಲ. ಸಾರ ಬಲಿದು ಶರಧಿಯ ಕೂಡಿದಾಗವೆ ಶರಣಸ್ಥಲ. ವಾರಿ ಬಲಿದು ವಾರಿಧಿಯಂತಾದಾಗವೆ ಐಕ್ಯಸ್ಥಲ. ಹೀಂಗಲ್ಲದೆ ಷಟ್ಸ್ಥಲಬ್ರಹ್ಮಿಗಳೆಂತಾದಿರಣ್ಣಾ ? ಕರೆಯದೆ ಪಶುವಿಂಗೆ ತೃಣವ ಘಳಿಸುವನಂತೆ, ಒಲ್ಲದ ಸತಿಯರಲ್ಲಿ ರತಿಕೂಟವ ಬಯಸುವನಂತೆ, ಗೆಲ್ಲತನಕ್ಕೆ ಹೋರುವರಲ್ಲಿ ಬಲ್ಲತನವನರಸುವನಂತೆ, ಕೊಲ್ಲಿಯಾವಿನಲ್ಲಿ ಸ್ವಲೀಲೆಯನರಸುವನಂತೆ, ಬಲಿದ ವಂಶದಲ್ಲಿ ಕಳಿಲೆಯನರಸುವನಂತೆ, ಬರಿಮಾತಿಂಗೆಡೆಯಾದುದುಂಟೆ ? ಬಯಲ ಕೊಂಡ ಘನಕ್ಕೆ ಅವಧಿಗೊಡಲಿಲ್ಲ. ಉರಿಕೊಂಡ ಕರ್ಪುರಕ್ಕೆ ರೂಪಿಂಗೆಡೆಯಿಲ್ಲ. ಬಯಲ ಬಡಿವಡೆವಂಗೆ ಕೈಗೆ ಮೃದುವಿಲ್ಲ. ಮನ ಮಹದಲ್ಲಿ ನಿಂದವಂಗೆ ಆರನೆಣಿಸಲಿಲ್ಲ, ಮೂರ ಮುಟ್ಟಲಿಲ್ಲ. ಮೀರಿದ ತೋರಿದ ಘನ ತನ್ನಲ್ಲಿ ನಿರ್ಲೇಪ, ನಿಃಕಳಂಕ ಮಲ್ಲಿಕಾರ್ಜುನಾ.