Index   ವಚನ - 712    Search  
 
ವ್ರತವ ಮಾಡಿಕೊಂಡೆವೆಂದು ಗನ್ನಘಾತಕತನದಲ್ಲಿ ನಡೆವಧಿಕರ ನೋಡಾ. ತನುವಿಂಗೆ ವ್ರತವೋ, ಮನಕ್ಕೆ ವ್ರತವೋ ? ಮಡಕೆಗೆ ವ್ರತವೆಂದು ಸಡಗರಿಸುತ್ತಿರ್ಪ ಗತಿಹೀನರ ಕಂಡು ನಾಚಿತ್ತೆನ್ನ ಮನ. ದಿಟದ ವ್ರತವ ಹೇಳಿಹೆ ಕೇಳಿರಣ್ಣಾ. ಹುಸಿ ಕಳವು ಪಾರದ್ವಾರ ಕೊಲೆ ಅತಿಚಾಂಡಾಲಮಂ ಬಿಟ್ಟು, ಪರದ್ರವ್ಯಕ್ಕೆ ಕೈಯಾನದೆ, ಪರರ ಬಾಗಿಲಲ್ಲಿ ನಿಂದು, ನೆರೆ ಹೊಲಬುಗೆಟ್ಟು, ಅರಿವುಳ್ಳವರು ನಾವೆಂದು ಬರಿದೆ ಹಲಬುತ್ತಿರ್ಪರ ಮಾತಿಗೆ ಒಡಲಪ್ಪುದೆ ಶೀಲೊ ? ತನ್ನ ಸುಬುದ್ಧಿಯಿಂದ, ಸುಕಾಯಕದಿಂದ, ಗುರುಲಿಂಗಜಂಗಮಕ್ಕೆ ತನುಮನಧನವಂ ಸವೆಸಿ, ಚಿತ್ತಶುದ್ಧನಾಗಿ ಅಚ್ಚೊತ್ತಿದಂತಿದ್ದುದೆ ಶೀಲವ್ರತ. ಹಾಂಗಲ್ಲದೆ ಜಾತಿಗಾರನ ಕೈಯ ದೀಹದಂತೆ, ಬಾಲೆಯರ ಮನದ ಸೋಲುವೆಯಂತೆ, ಇಂತಿವರಾಳವಾಡಿ ಸಿಕ್ಕಿಸುವ, ಸೋಲುಗಾರರಿಗೆಲ್ಲಿಯದೊ ಸತ್ಯ, ನಿಃಕಳಂಕ ಮಲ್ಲಿಕಾರ್ಜುನಾ ?