Index   ವಚನ - 719    Search  
 
ಶುಕ್ತಿಕರಂಡದಲ್ಲಿ ಬಿದ್ದ ಅಪ್ಪು, ಶುಕ್ತಿಯ ಭೇದವೋ? ಕರಂಡದ ಭೇದವೋ? ಅಪ್ಪುವಿನ ಭೇದವೋ? ಕಾಯದಲ್ಲಿದ್ದ ಭಾವ, ಭಾವದಲ್ಲಿದ್ದ ಜೀವ, ಜೀವದಿಂದ ಭಾವವಾಯಿತ್ತೋ, ಭಾವದಿಂದ ಕಾಯವಾಯಿತ್ತೋ? ಪಾಷಾಣವ ಕೂಡಿದ್ದ ರತಿ, ರತಿಯ ಕೂಡಿದ್ದ ಬೆಳಗು, ಬೆಳಗು ರತಿಯಿಂದಲಾಯಿತ್ತೋ, ರತಿ ಶಿಲೆಯಿಂದಲಾಯಿತ್ತೋ? ಇಂತೀ ಅಂಗ ತ್ರಿವಿಧ, ಇಂತೀ ಭಾವ ತ್ರಿವಿಧ, ಇಂತಿ ಜೀವ ತ್ರಿವಿಧ. ಇಂತೀ ತ್ರಿವಿಧ ಸ್ಥಲಂಗಳಲ್ಲಿ ಇಂತೀ ತ್ರಿವಿಧ ಸೂಕ್ಷ್ಮಂಗಳಲ್ಲಿ, ಇಂತೀ ತ್ರಿವಿಧ ಕಾರಣಂಗಳಲ್ಲಿ, ಅಳಿವ ಉಳಿವ ಉಭಯವನರಿತು ನೆನೆವುದು, ನೆನೆಯಿಸಿಕೊಂಬ ಉಭಯವನರಿತು, ಉಭಯ ಒಂದಾದಲ್ಲಿ ಪ್ರಾಣಲಿಂಗ. ಉಭಯಸಂಬಂಧ ಉಭಯ ಲೇಪವಾದಲ್ಲಿ, ಐಕ್ಯಾನುಭಾವ, ನಿಃಕಳಂಕ ಮಲ್ಲಿಕಾರ್ಜುನಾ.