Index   ವಚನ - 778    Search  
 
ಹಸಿದು ಅಶನವ ಮುಸುಕಿಟ್ಟುಕೊಂಡಡೆ, ಹಸಿವು ಹರಿದುದುಂಟೆ ? ನಿಹಿತದ ಸ್ಥಲವ ಎಷ್ಟ ನುಡಿದಡೇನು, ಆ ಸ್ಥಲ ಆತ್ಮನಲ್ಲಿ ನಿಹಿತವಾಗಬೇಕು. ಅದು ಮೃತ್ತಿಕೆಯ ತಿಟ್ಟದ ಉಭಯದಲ್ಲಿ ನಿಂದ ಕರುವಿನಂತೆ. ಆ ತ್ರಿವಿಧವ ನೇತಿಗಳೆದು ನಿಂದ ಲೋಹದಂಗದಂತೆ. ಅದು ಭಕ್ತನ ಸತ್ಯದ ನಿಜ, ಅದು ಮಾಹೇಶ್ವರನ ಮಾಟಕೂಟ. ಅದು ಪ್ರಸಾದಿಯ ಪ್ರಸನ್ನ, ಅದು ಪ್ರಾಣಲಿಂಗಿಯ ಪರಮಸುಖ. ಅದು ಶರಣನ ಸನ್ನದ್ಧ, ಅದು ಐಕ್ಯನ ಅದೃಶ್ಯ. ಇಂತೀ ಷಡುಸ್ಥಲಭರಿತನಾಗಿ, ಚಿತ್ರದ ಲೆಪ್ಪ ಒಡೆದಂತೆ ಮತ್ತೆ ಲಕ್ಷಣವುಂಟೆ? ಲಕ್ಷಿಸಿ ಅಲಕ್ಷವಾದಲ್ಲಿ, ಪೂರ್ವದಲ್ಲಿ ಕಂಡು, ಉತ್ತರದಲ್ಲಿ ತಿಳಿದು ನಿಶ್ಚಯವಾದಲ್ಲಿ, ಉಭಯದ ಕಕ್ಷೆಯಿತ್ತ, ನಾನೆತ್ತ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.