Index   ವಚನ - 61    Search  
 
ಸ್ಥಳ ಕುಳವನರಿಯಬೇಕೆಂಬರು, ಭಕ್ತನಾಗಿ ಮಾಹೇಶ್ವರನಾಗಬೇಕೆಂಬರು. ಮಾಹೇಶ್ವರನಾಗಿ ಪ್ರಸಾದಿಯಾಗಬೇಕೆಂಬರು. ಪ್ರಸಾದಿಯಾಗಿ ಪ್ರಾಣಲಿಂಗಿಯಾಗಬೇಕೆಂಬರು. ಪ್ರಾಣಲಿಂಗಿಯಾಗಿ ಶರಣಾಗಬೇಕೆಂಬರು. ಶರಣನಾಗಿ ಐಕ್ಯನಾಗಬೇಕೆಂಬರು. ಐಕ್ಯ ಏತರಿಂದ ಕೂಟ? ನಾನರಿಯೆ. ಒಳಗಣ ಮಾತು, ಹೊರಹೊಮ್ಮಿಯಲ್ಲದೆ ಎನಗೆ ಅರಿಯಬಾರದು. ಎನಗೆ ಐಕ್ಯನಾಗಿ ಶರಣಾಗಬೇಕು, ಶರಣನಾಗಿ ಪ್ರಾಣಲಿಂಗಿಯಾಗಬೇಕು. ಪ್ರಾಣಲಿಂಗಿಯಾಗಿ ಪ್ರಸಾದಿಯಾಗಬೇಕು, ಪ್ರಸಾದಿಯಾಗಿ ಮಾಹೇಶ್ವರನಾಗಬೇಕು. ಮಾಹೇಶ್ವರನಾಗಿ ಭಕ್ತನಾಗಬೇಕು, ಭಕ್ತನಾಗಿ ಸಕಲಯುಕ್ತಿಯಾಗಬೇಕು. ಯುಕ್ತಿ ನಿಶ್ಚಯವಾದಲ್ಲಿಯೆ, ಐಕ್ಯಸ್ಥಲ ಒಳಹೊರಗಾಯಿತ್ತು. ಅಲೇಖ ಲೇಖವಾಯಿತ್ತು, ಎನಗೆ ಕಾಣಬಂದಿತ್ತು. ಅಲೇಖನಾದ ಶೂನ್ಯ ಶಿಲೆಯ ಹೊರಹೊಮ್ಮಿ ಕಂಡೆ ನಿನ್ನನ್ನು.