ಲವಣನಿರಶನದ ಆಯತದ ಭೇದವೆಂತೆಂದಡೆ:
ಕಾರಲವಣ ನಿಷೇಧವೆಂದು ಬಿಟ್ಟು,
ಮತ್ತೆ ಬಿಳಿಯ ಲವಣ ಬಳಸುವುದು.
ಬಿಳಿಯ ಲವಣ ನಿಷೇಧವೆಂದು ಬಿಟ್ಟು
ಮತ್ತೆ ಸೈಂಧ ಲವಣ ಬಳಸುವುದು.
ಸೈಂಧ ಲವಣ ನಿಷೇಧವೆಂದು ಬಿಟ್ಟು,
ಮತ್ತೆ ಮೃತ್ತಿಕೆ ಲವಣ ಬಳಸುವುದು.
ಮೃತ್ತಿಕೆ ಲವಣದಲ್ಲಿ ತಟ್ಟುಮುಟ್ಟು ಕಂಡ ಮತ್ತೆ
ಉಪ್ಪೆಂಬ ನಾಮವ ಬಿಟ್ಟಿಹುದೇ ಲೇಸು.
ಈ ಅನುವ ನಾನೆಂದುದಿಲ್ಲ,
ನಿಮ್ಮ ಅನುವ ನೀವೇ ಬಲ್ಲಿರಿ.
ಅನುವಿಗೆ ತಕ್ಕ ವ್ರತ, ವ್ರತಕ್ಕೆ ತಕ್ಕ ಆಚಾರ,
ಆಚಾರಕ್ಕೆ ತಕ್ಕ ಖಂಡಿತ.
ಆವಾವ ನೇಮದಲ್ಲಿಯೂ ಭಾವ ಶುದ್ಧವಾದವಂಗೆ
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.