Index   ವಚನ - 151    Search  
 
ಹಲವುತೆರದ ಕ್ರೀಯನಾಧರಿಸಿ ನಡೆವಲ್ಲಿ ಅಂಗಕ್ಕೆ ಆಚಾರ, ಮನಕ್ಕೆ ಅರಿವು ಮುಂತಾಗಿ, ಪೂರ್ವದ ಸ್ವಸ್ಥಾನ, ಉತ್ತರದ ನಿಶ್ಚಯವ ಕಂಡು, ಸತ್ಕ್ರೀಯಿಂದ ಆದರಿಸಿ, ಪರಧನ, ಪರಸತಿ, ಪರಾಪೇಕ್ಷೆ, ಅನ್ಯನಿಂದೆ, ದುರ್ಗುಣ, ದುಶ್ಚರಿತ್ರ, ದುರ್ವಿಕಾರ, ದುರ್ಬೋಧೆ ಇಂತೀ ಅನ್ಯವ ನೇತಿಗಳೆದು, ತನಗೆ ಅನ್ಯವಿಲ್ಲದುದ ಅಂಗೀಕರಿಸಿ, ತಾ ಹಿಡಿದ ವ್ರತಕ್ಕೆ ತನ್ನ ಸತಿಸುತ, ತನ್ನ ಕ್ರೀ ಮುಂತಾದ ಒಡೆಯರು ಭಕ್ತರು ಸಹವಾಗಿ ತಾ ತಪ್ಪದೆ, ತಪ್ಪಿದವರ ಕಂಡು ಒಳಗಿಟ್ಟುಕೊಂಡು ಒಪ್ಪದೆ ಇಪ್ಪ ಭಕ್ತನ ಸತ್ಯದ ಕಾಯವಳಿಯಿತ್ತು ಉಳಿಯಿತ್ತೆಂಬ ಸಂದೇಹವಿಲ್ಲ. ಆತನಿಹಪರದಲ್ಲಿ ಸುಖಿ. ಆತನಾಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.